ನ್ಯೂಸ್

ವುಡ್‌ಪ್ರಿಂಟ್ ಚಿತ್ರಕಲಾ ಪ್ರದರ್ಶನ

ಮೈಸೂರು: ಏಷ್ಯನ್ ರಾಷ್ಟ್ರಗಳು ವುಡ್‌ಪ್ರಿಂಟ್ ಚಿತ್ರಕಲೆಯನ್ನು ಜಗತ್ತಿಗೆ ಪರಿಚಯ ಮಾಡಿವೆ ಎಂದು ಕಾವಾ ಅನ್ವಯಿಕ ಕಲಾ ವಿಭಾಗದ ಮುಖ್ಯಸ್ಥ ಬಿಂದುರಾಯ ಬಿರಾದಾರ್ ಹೇಳಿದರು.

ವಿಜಯನಗರದ ಶ್ರಿ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಫೌಂಡೇಷನ್ ವಿಭಾಗದ ವಿದ್ಯಾರ್ಥಿಗಳಿಂದ ತಯಾರಿಸಿದ ವುಡ್ ಪ್ರಿಂಟ್ ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವುಡ್ ಪ್ರಿಂಟ್ ಕಲೆಯನ್ನು ಚೀನಿಯರು, ಜಪಾನಿಯರು ವಾಣಿಜ್ಯ ಉದ್ದೇಶಕ್ಕಾಗಿ ಮತ್ತು ಕಲಾವಿದರ ಕಲೆಗಳ ಪ್ರದರ್ಶನಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಕರ್ನಾಟಕದಲ್ಲೂ ಈ ಕಲೆ ಹೆಚ್ಚಿನ ಹೆಸರು ಮಾಡಿತ್ತು ಎಂದರು.

ವನ್ಯಜೀವಿ ಛಾಯಾಚಿತ್ರ ಕಲಾವಿದ ಶಾಂತಪ್ಪ ಮಾತನಾಡಿ, ಹಳೆಯ ಕಾಲದ ಲಿಥೋ ಪ್ರಿಂಟ್ ವಿದ್ಯಾರ್ಥಿಗಳ ಮೂಲಕ ಪುನರಾವರ್ತನೆಗೊಂಡಿದೆ. ಇದು ಭಾರತದಲ್ಲಿ 1,000 ವರ್ಷಗಳ ಹಿಂದಿನಿಂದಲೂ ಬಳಕೆಯಲ್ಲಿದೆ. ಬ್ರಿಟಿಷರು ಭಾರತದಲ್ಲಿ ಧರ್ಮ ಪ್ರಚಾರ ಮಾಡಲು ತಮ್ಮ ಧರ್ಮಗ್ರಂಥ ಬೈಬಲ್ ಮುದ್ರಣಕ್ಕಾಗಿ ಅಚ್ಚುಮೊಳೆ ಪರಿಚಯಿಸಿದರು. ನಂತರ ಆವಿಷ್ಕಾರಗೊಂಡು ಅಲ್ಯುಮಿನಿಯಂ ಹಾಳೆ ಮೇಲೆ ಮೈಕ್ರೋಡಾಟ್ ಮುದ್ರಣ ಬಂತು. ಇಂದು ತಾಂತ್ರಿಕ ಯುಗದಲ್ಲಿ ಕಂಪ್ಯೂಟರ್ ಬಳಸಿಕೊಂಡು ಮುದ್ರಣ ಮಾಡಲಾಗುತ್ತಿದೆ ಎಂದರು.

ಪ್ರಾಥಮಿಕ ಬಣ್ಣಗಳನ್ನು ಬಳಸಿಕೊಂಡು ಬಹಳ ಸೊಗಸಾಗಿ ವುಡ್‌ಪ್ರಿಂಟ್ ಮಾಡಿ ಹಳೆಯ ಕಲೆಯನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದಾರೆ ಎಂದರು. ವಿದ್ಯಾರ್ಥಿಗಳಿಂದ ರಚನೆಯಾಗಿದ್ದ ವಿವಿಧ ವುಡ್ ಪ್ರಿಂಟ್ ಚಿತ್ರಕಲೆಗಳ ಪ್ರದರ್ಶನ ನಡೆಯಿತು. ಪ್ರಾಂಶುಪಾಲ ಕೆ.ಸಿ.ಮಹದೇವ ಶೆಟ್ಟಿ, ಚಿತ್ರಕಲಾ ಶಿಕ್ಷಕ ರವೀಂದ್ರ ಲಾಲ್, ಸಂಚಾಲಕ ಪರಮೇಶ್ ಹಾಜರಿದ್ದರು.