ನ್ಯೂಸ್

ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದಲ್ಲಿ ಆನ್​ಲೈನ್ ಶಿಕ್ಷಣ

ಗೋಕರ್ಣ: ಶಿಕ್ಷಣ ಎನ್ನುವುದು ವಿದ್ಯೆಯ ಅಭ್ಯಾಸ ಆಗಬೇಕು. ಅದು ವಿದ್ಯೆಯ ಆಭಾಸ ಆಗಬಾರದು. ಶಿಕ್ಷಣದಲ್ಲಿ ಭಾರತೀಯ ವಿದ್ಯೆ ಬೆಳಗಿದರೆ ಮಾತ್ರ ಭಾರತ ಬೆಳೆಯುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಇಲ್ಲಿನ ಅಶೋಕೆಯಲ್ಲಿ ಬುಧವಾರ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಆನ್​ಲೈನ್ ಶಿಕ್ಷಣಕ್ಕೆ ಶ್ರೀಗಳು ದೀಪ ಬೆಳಗಿಸಿ ಚಾಲನೆಯಿತ್ತು ವಿದ್ಯಾರ್ಥಿ ಗಳಿಗೆ ಪ್ರಥಮ ಪಾಠ ಅನುಗ್ರಹಿಸಿದರು. ವಿಶ್ವದಲ್ಲಿ ಎಲ್ಲೂ ಲಭ್ಯವಿರದ ಪರಿಪೂರ್ಣವಾದ ಮತ್ತು ಅಪೂರ್ವವಾದ ಶಿಕ್ಷಣ ನಮ್ಮ ಯುವ ಜನಾಂಗಕ್ಕೆ ಸಿಗಬೇಕು ಎನ್ನುವ ಉದ್ದೇಶದಿಂದ ಶ್ರೀಮಠ ಈ ವಿಶ್ವ ವಿದ್ಯಾಪೀಠದ ಸ್ಥಾಪನೆಗೆ ಮುಂದಾಗಿದೆ. ದೇಶದ ಸಮಸ್ತ ಗುರುಕುಲಕ್ಕೆ ಸ್ಪೂರ್ತಿಯಾದ ಚಾಣಕ್ಯರ ಹೆಸರನ್ನು ಈ ವಿದ್ಯಾಪೀಠಕ್ಕೆ ಇಡಲಾಗಿದೆ. ಭಾರತಕ್ಕೆ ತಿರುವು ಕೊಡಬಲ್ಲ ಗುರುಕುಲಗಳ ಶುಭಾರಂಭ ಈ ಮಹತ್ಕಾರ್ಯಕ್ಕೆ ಪೀಠಿಕೆ ಮಾತ್ರ ಎಂದು ಶ್ರೀಗಳು ನುಡಿದರು.

ಗುರುಕುಲಗಳ ಪಾರಂಪರಿಕ ವಾಹಿನಿಯ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ನುಡಿದರು. ವಿದ್ವಾನ್ ಜಗದೀಶ ಶರ್ಮಾ ಸಂಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.