ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಶತರುದ್ರಾಭಿಷೇಕ ರಾಜೋಪಚಾರ ಪೂಜಾ ವಿಧಾನಗಳನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ನೇತೃತ್ವದಲ್ಲಿ ನೆರವೇರಿತು. ಎಸ್.ಬಿ.ಹಿರೇಮಠ, ಪ್ರಭುದೇವ ಕಲ್ಮಠ, ಶಿವಪ್ರಕಾಶ ಶಾಸಿ, ಚಂದ್ರಶೇಖರಸ್ವಾಮಿ ಇತರರಿದ್ದರು 
ನ್ಯೂಸ್

ವಿಶ್ವಾಸ ಬದುಕಿಗೆ ಭದ್ರ ಬುನಾದಿ

ಬಾಳೆಹೊನ್ನೂರು: ಜೀವನದ ಸಮೃದ್ಧಿಗೆ ಸಮಾಧಾನಕ್ಕೆ ದೈವೀ ಗುಣಗಳು ಕಾರಣವಾಗುತ್ತವೆ. ದೈವೀ ಗುಣಗಳನ್ನು ಸಂರಕ್ಷಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದೇವರು ಧರ್ಮ, ನಂಬಿಕೆ ಮೇಲೆ ನಿಂತಿವೆ. ಇವುಗಳಲ್ಲಿ ನಂಬಿಕೆ, ವಿಶ್ವಾಸ ಕಳೆದುಕೊಳ್ಳಬಾರದು. ವಿಶ್ವಾಸ ಬದುಕಿಗೆ ಭದ್ರ ಬುನಾದಿ ಒದಗಿಸುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಮಂಗಳವಾರ ನಡೆದ ಶತರುದ್ರಾಭಿಷೇಕ, ರಾಜೋಪಚಾರ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾನವ ಜೀವನದ ನಿರಂತರ ಹೋರಾಟದಲ್ಲಿ ದೇಹ, ಬುದ್ಧಿ ಮಲಿನವಾಗುವುದುಂಟು. ಅವುಗಳನ್ನು ಶ್ರದ್ಧೆಯಿಂದ ನಿರ್ಮಲಗೊಳಿಸುವತ್ತ ಗಮನವಿರಬೇಕು. ಗುಲಾಬಿ ಗಿಡದಲ್ಲಿ ಹೂವಿದೆ, ಹಸಿರಿದೆ, ಮುಳ್ಳೂ ಇದೆ. ಕೆಲವರ ಲಕ್ಷ್ಯ ಹೂವಿನತ್ತ ಇದ್ದರೆ ಕೆಲವರ ಗಮನ ಮುಳ್ಳಿನತ್ತ ಇರುತ್ತದೆ. ಈ ಜಗತ್ತು ಗುಲಾಬಿ ಕಂಟಿ. ಕೆಲವರು ಹೂವಿನ ಸ್ವರೂಪ ಕಂಡರೆ ಕೆಲವರು ಕುರೂಪವನ್ನೇ ಕಾಣುತ್ತಾರೆ. ನೋಡುವ ನೋಟ ಚೆನ್ನಾಗಿದ್ದರೆ ಬದುಕು ಸುಂದರವಾಗಿ ಕಾಣುತ್ತದೆ ಎಂದರು.

ಉರಿಯುವ ಹಣತೆ ಮಣ್ಣಿನದಾದರೇನು ಹೊನ್ನಿನದಾದರೇನು. ಉರಿಯುವ ಜ್ಯೋತಿ ಒಂದೇ. ಜಗತ್ತನ್ನು ನಿರ್ಮಿಸಿದ ಪರಮಾತ್ಮ ಒಬ್ಬನೇ. ಆದರೆ ಹೆಸರುಗಳು ಅನಂತವಾಗಿವೆ. ಶಿವನಿಗೆ ಅಭಿಷೇಕ ಬಹಳ ಪ್ರೀತಿ. ಶಿವನಿಗೆ ಜಲಧಾರೆ-ಕ್ಷೀರಾಭಿಷೇಕ ಮಾಡಿ ಮನುಷ್ಯ ಸಂತೃಪ್ತ ಭಾವನೆ ತಾಳುತ್ತಾನೆ. ದೇವರು, ಧರ್ಮ ಮತ್ತು ಗುರುವಿನಲ್ಲಿ ಶ್ರದ್ಧೆ ಮತ್ತು ನಂಬಿಕೆ ಕಳೆದುಕೊಳ್ಳಬಾರದು ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗ ಶಾಸಿ ಹಾಗೂ ಗುರುಕುಲ ಸಾಧಕರು ಶತರುದ್ರಾಭಿಷೇಕ, ರಾಜೋಪಚಾರ ಪೂಜಾ ಸಂಕಲ್ಪ ಪೂರ್ವಕ ನೆರವೇರಿಸಿದರು. ಪೂಜಾ ಸಮಾರಂಭದಲ್ಲಿ ಶ್ರೀಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪ, ಶಿವಪ್ರಕಾಶ ಶಾಸಿ, ಮಧುಕುಮಾರ ಶಾಸಿ, ಚಂದ್ರಶೇಖರಸ್ವಾಮಿ, ರೇಣುಕಸ್ವಾಮಿ, ರವಿ, ರುದ್ರೇಶ, ಗದಿಗೆಯ್ಯ ಹಿರೇಮಠ, ಗಂಗಾಧರ, ಶಿವಕುಮಾರ ಹಿರೇಮಠ, ಕುಮಾರ ಹಿರೇಮಠ ಮತ್ತಿತರರಿದ್ದರು.