ಚಿತ್ರದುರ್ಗ: ವಿಶ್ವ 3ನೇ ಮಹಾಯುದ್ಧದ ಹಂತದಲ್ಲಿದೆ. ಸಣ್ಣ-ಪುಟ್ಟ ರಾಷ್ಟ್ರಗಳು ಈ ವಿಚಾರವಾಗಿ ಹಿಂದೆ ಬಿದ್ದಿಲ್ಲ. ಇದರ ಹಿಂದಿನ ಹಿತಾಸಕ್ತಿಯನ್ನು ಬುದ್ಧ, ಬಸವನ ಅನುಯಾಯಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಲಹೆ ನೀಡಿದರು.
ಶಿವಶರಣ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್, ಇಂಡೋ-ಟಿಬೆಟ್ ಸ್ನೇಹ ಸೊಸೈಟಿಯಿಂದ ಮುರುಘಾಮಠದ ಅನುಭವ ಮಂಟಪದಲ್ಲಿ ಟಿಬೆಟ್ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ, ‘ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವ ಧರ್ಮ ಜಾತ್ಯತೀತ ಧರ್ಮ. ಬುದ್ಧನ ಶಾಂತಿ ಮಾರ್ಗ, ಬಸವಾದಿ ಶರಣರ ಚಿಂತನೆ, ಆಶಯ ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ಹೀಗಾಗಿ ಸಮುದಾಯಗಳೂ ಹರಿದು ಹಂಚಿ ಹೋಗಿವೆ. ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಸತ್ತ ನಂತರ ತಿಪ್ಪೆಗೆ ಸಮ. ಸಮಾಜ ಪರಿವರ್ತನೆಗಾಗಿ ಶ್ರಮಿಸಿದ ಮಹನೀಯರೇ ಶಾಶ್ವತ ಎಂದರು.
ಇದೇ ವೇಳೆ ಟಿಬೆಟ್ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಲೋಗೋ ಬಿಡುಗಡೆ ಮಾಡಲಾಯಿತು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಪ್ರಸನ್ನಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಾರ್ಕ್ ರಾಷ್ಟ್ರಗಳ ಪ್ರತಿನಿಧಿ ಜುಗ್ಮೇ ಜುಂಗ್ನಿ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮುಖಂಡರಾದ ಮಾರಸಂದ್ರ ಮುನಿಯಪ್ಪ, ಜಿ.ಎಸ್. ಮಂಜುನಾಥ್, ಎಂ.ಕೆ. ತಾಜ್‌ಪೀರ್, ಒ. ಶಂಕರ್ ಇತರರಿದ್ದರು.