ಸಿಂಸೆಯ ವಿಶ್ವಕರ್ಮ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಂಕರ ಆಚಾರ್ಯ, ಭಾಸ್ಕರ ಆಚಾರ್ಯ, ಸರೋಜಾ ಆಚಾರ್ಯ, ರೇಖಾ ಪ್ರಕಾಶ ಆಚಾರ್ಯ, ವಿಶ್ರಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕೃಷ್ಣಯ್ಯಆಚಾರ್, ವಿಜಯಕುಮಾರ್ ಆಚಾರ್ಯ, ಜಯಶ್ರೀ ಕೃಷ್ಣಯ್ಯ ಆಚಾರ್, ಚೇತನ್‌ಕುಮಾರ್ ಇದ್ದರು. 
ನ್ಯೂಸ್

ವಿಶ್ವಕರ್ಮ ಸಮಾಜದವರು ಒಗ್ಗೂಡಲಿ

ಎನ್.ಆರ್.ಪುರ: ವಿಶ್ವಕರ್ಮ ಸಮಾಜದ ಹಿರಿಯರು ಮಕ್ಕಳಿಗೆ ನಮ್ಮ ಸಮಾಜದ ಸಂಪ್ರದಾಯ, ಆಚಾರ, ವಿಚಾರ, ಗಾಯತ್ರಿ ಮಂತ್ರ ಕಲಿಸಬೇಕು ಎಂದು ಚಿಕ್ಕಮಗಳೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಭಾರ ಪ್ರಾಚಾರ್ಯ ವಿಜಯಕುಮಾರ್ ಆಚಾರ್ಯ ಹೇಳಿದರು.

ಅವರು ತಾಲೂಕಿನ ಸಿಂಸೆಯ ವಿಶ್ವಕರ್ಮ ಸಭಾ ಭವನದಲ್ಲಿ ತಾಲೂಕು ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘ, ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಾಜ ಸಂಘ ಹಾಗೂ ವಿರಾಟ್ ವಿಶ್ವಕರ್ಮ ಚಂಡೆ ಬಳಗದ ಆಶ್ರಯದಲ್ಲಿ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಮಹಿಳೆಗೆ ಪೂಜ್ಯ ಸ್ಥಾನಮಾನ ನೀಡಲಾಗಿದೆ. ಎಲ್ಲ ನದಿಗಳಿಗೂ ಮಹಿಳೆಯ ಹೆಸರು ಇಡಲಾಗಿದೆ. ಧನ ಸಂಪತ್ತಿಗೆ ಲಕ್ಷ್ಮೀ, ವಿದ್ಯೆ ಕಲಿಯಲು ಸರಸ್ವತಿ, ಗ್ರಾಮ ದೇವತೆಗಳಿಗೂ ಹೆಣ್ಣಿನ ಹೆಸರು ಇಡಲಾಗಿದೆ. ವಿಶ್ವಕರ್ಮ ಸಮಾಜದವರು ಒಗ್ಗೂಡಬೇಕು ಎಂದು ತಿಳಿಸಿದರು.

ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜಕ್ಕೆ ಸಂಘಟನೆ ಅತಿ ಮುಖ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ನೂತನ ಕಾಳಿಕಾಂಬ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ 10 ಲಕ್ಷ ರೂ. ಮಂಜೂರು ಮಾಡಿಸಿದ್ದಾರೆ. ಸಮಾಜದ ಎಲ್ಲರೂ ದೇವಸ್ಥಾನ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ರಾಜೇಶ ಆಚಾರ್ಯ, ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಾಜದ ಜಿಲ್ಲಾ ಸಂಘದ ಗೌರವಾಧ್ಯಕ್ಷ ಚೇತನ್‌ಕುಮಾರ್, ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್ಯ, ಪಾರ್ವತಿ, ಟಿ.ಜಿ.ಸೌಖ್ಯ, ಅರುಣ ಆಚಾರ್ಯ ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ನಿವೃತ್ತ ಯೋಧರಾದ ಶಂಕರ ಆಚಾರ್ಯ, ಭಾಸ್ಕರ ಆಚಾರ್ಯ, ಆಶಾ ಕಾರ್ಯಕರ್ತೆ ಸರೋಜಾ ಆಚಾರ್ಯ, ಸಾರ್ವಜನಿಕ ಆಸ್ಪತ್ರೆ ನೌಕರರಾದ ರೇಖಾ ಪ್ರಕಾಶ ಆಚಾರ್ಯ, ಗಾಯಕಿ ವಿಶ್ರಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.