ನಿಪ್ಪಾಣಿ: ಕರ್ನಾಟಕದಲ್ಲಿ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ (ಮುಜರಾಯಿ ಇಲಾಖೆ) ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ ಪರಿಚಯಿಸುವುದು, ಇಲಾಖೆಯ ವ್ಯಾಪ್ತಿಯಲ್ಲಿ ಹೊಸ ದೇವಾಲಯಗಳ ಸೇರ್ಪಡೆ, ಯಾತ್ರಿ ಭವನಗಳ ನಿರ್ಮಾಣದಂತಹ ನವೀನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ಜಿ.ಕೃಷ್ಣ ರೆಡ್ಡಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಈಚೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಕಾರ್ಯಕ್ರಮಗಳಿಗೆ ಪ್ರತ್ಯೇಕ ಆರ್ಥಿಕ ನೆರವು ನೀಡುವ ಯಾವುದೇ ಯೋಜನೆಗಳು ಭಾರತ ಸರ್ಕಾರದ ಹಣಕಾಸು ಇಲಾಖೆ ಅಥವಾ ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿಲ್ಲ. ಅಲ್ಲದೆ, ಇಂತಹ ಪ್ರಮುಖ ಸ್ಥಳಗಳನ್ನು ಜೋಡಿಸುವ ಕುರಿತು ತಕ್ಷಣಕ್ಕೆ ಯಾವ ಯೋಜನೆ ಇರುವುದಿಲ್ಲ. ಪುರಾತತ್ವ ಇಲಾಖೆ ವತಿಯಿಂದ ಇಂತಹ ಸ್ಥಳಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿರುತ್ತದೆ.
ಆದಾಗ್ಯೂ ಕರ್ನಾಟಕ ಸರ್ಕಾರದ ಮುಜರಾಯಿ ಸಚಿವಾಲಯದ ಇಂತಹ ನವೀನ ಉದ್ಯಮಗಳಿಗೆ ಭಾಗಶಃ ಹಣಕಾಸು ಒದಗಿಸಲು ಸಂಸ್ಕೃತಿ ಸಚಿವಾಲಯವು ಪ್ರಸ್ತಾಪಿಸುತ್ತದೆ ಎಂದು ತಿಳಿಸಿದರು.