ಮೂಗೂರು: ಶ್ರಾವಣ ಮಾಸದ ಮೊದಲ ಶನಿವಾರದ ಅಂಗವಾಗಿ ಗ್ರಾಮದ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀದೇಶೇ ್ವರ, ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗಿನ ಅವಧಿಯಲ್ಲಿ ವಿಶೇಷ ಅಭಿಷೇಕ ನೆರವೇರಿದವು.
ಜೀರ್ಣೋದ್ಧಾರಗೊಂಡ ಚೋಳರ ಕಾಲದ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇಗುಲದಲ್ಲಿ ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಶನಿವಾರ ರಾತ್ರಿ ಭಕ್ತರ ಸಮ್ಮುಖದಲ್ಲಿ ಪೂಜೆ, ನಂತರ ಪ್ರಸಾದ ವಿನಿಯೋಗ ನಡೆಯಿತು.
ವಾರ್ಷಿಕೋತ್ಸವ: ಮೂಗೂರು ಸಮೀಪದ ಹೊಸಹಳ್ಳಿಯಲ್ಲಿ ಶ್ರೀ ಶನೇಶ್ಚರಸ್ವಾಮಿ ದೇಗುಲದಲ್ಲಿ ವಾರ್ಷಿಕೋತ್ಸವ, ದೇವರಿಗೆ ಹೂವಿನ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ನೇರಳೆ ಮರದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ರಾಜ ವಿಕ್ರಮ ಶನಿದೇವರ ಹರಿಕಥೆ ಮತ್ತು ಅನ್ನಸಂತರ್ಪಣೆ ನಡೆಯಿತು.