ನ್ಯೂಸ್

ವಿವಿಧತೆಯಲ್ಲಿ ಏಕತೆ ಸಂದೇಶ ಸಾರೋಣ

ಹುಣಸೂರು: ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುವತ್ತ ಎಲ್ಲರೂ ಗಮನಹರಿಸೋಣ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಕರೆ ನೀಡಿದರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ
ಧ್ವಜಾರೋಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರೃ ನಂತರ ದೇಶದ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಹುಣಸೂರು ತಾಲೂಕು ವಿವಿಧ ಜಾತಿ, ಮತ, ಧರ್ಮಗಳ ತವರಾಗಿದೆ. ಸಾಮಾಜಿಕ ನ್ಯಾಯ ನೀಡಿದ ದೇವರಾಜ ಅರಸು ಅವರಿಗೆ ಜನ್ಮ ನೀಡಿದ ತವರು ನೆಲವಾಗಿದೆ ಎಂದವರು ಹೇಳಿದರು.


ತಾಲೂಕಿನ ಬಡವರ, ಶೋಷಿತರ ಪರವಾಗಿ ನಾನು ದುಡಿಯುತ್ತೇನೆ. ಶಿಕ್ಷಣ, ಆರೋಗ್ಯ ಮತ್ತು ಕೃಷಿಕರ ಬಾಳು ಹಸನಾಗುವುದೇ ನನ್ನ ಗುರಿ. ಬಡಜನರಿಗೆ ಶಾಶ್ವತ ಸೂರು ಒದಗಿಸುವುದು ನನ್ನ ಉದ್ದೇಶ. ಭಾರತ ವಿಶ್ವಗುರು ಸ್ಥಾನಕ್ಕೆ ಏರುತ್ತಿರುವ ಮತ್ತು ಆರ್ಥಿಕ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ದೇಶ ಕಾಯುವ ಯೋಧ ಮತ್ತು ದೇಶಕ್ಕೆ ಅನ್ನ ನೀಡುವ ರೈತರನ್ನು ಗೌರವಿಸಿ ಮುನ್ನಡೆಯೋಣ ಎಂದರು.


ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಧ್ವಜಾರೋಹಣ ನೆರವೇರಿಸಿ ಶುಭಾಶಯದ ನುಡಿಗಳನ್ನಾಡಿದರು. ಡಿವೈಎಸ್‌ಪಿ ಮಹೇಶ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿದ್ದಬಸಮ್ಮ, ಇಒ ಬಿ.ಕೆ.ಮನು, ತಹಸೀಲ್ದಾರ್ ಯು.ಎಸ್.ಅಶೋಕ್, ಬಿಇಒ ಎಸ್.ರೇವಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ 25ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.


ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಂಗೀತ, ನೃತ್ಯ ಕಾರ್ಯಕ್ರಮ ನೋಡುಗರ ಮನಗೆದ್ದವು. ಶಾಸ್ತ್ರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಪ್ರೇಮಿ ಭಗತ್‌ಸಿಂಗ್ ಕುರಿತಾದ ನೃತ್ಯರೂಪಕ ಪ್ರಥಮಬಹುಮಾನ ಗಳಿಸಿತು. ತಾಲೂಕಿನ ಐದು ಜನ ಹಿರಿಯ ನಾಗರಿಕರಿಗೆ ಹಾಗೂ ಕೆಎಸ್‌ಆರ್‌ಟಿಸಿ ಹುಣಸೂರು ಘಟಕದಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಐವರು ನೌಕರರಿಗೆ ಸನ್ಮಾನಿಸಲಾಯಿತು.


ಅವಾಂತರಗಳ ಗೂಡಾದ ಕಾರ್ಯಕ್ರಮ: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜಕರ ನಡುವಿನ ಸಂವಹನ ಕೊರತೆಯಿಂದಾಗಿ ಅವಾಂತರಗಳ ಗೂಡಾಗಿ ಪರಿವರ್ತಿತವಾಯಿತು. ಧ್ವಜಾರೋಹಣ ನೆರವೇರಿಸಲು ಉಪವಿಭಾಗಾಧಿಕಾರಿ ಮುಂದಾಗಿ ಹಗ್ಗ ಹಿಡಿದುಕೊಂಡ ಕೂಡಲೇ ಇದ್ದಕ್ಕಿದ್ದಂತೆ ಧ್ವಜ ಕಂಬದಿಂದ ಅರ್ಧದವರೆಗೆ ಕೆಳಕ್ಕೆ ಜಾರಿತು. ಕೂಡಲೇ ಎಚ್ಚೆತ್ತುಕೊಂಡ ಸೇವಾದಳದ ಸದಸ್ಯರು ಹಗ್ಗವನ್ನು ಹಿಡಿದು ಮತ್ತೆ ಮೇಲಕ್ಕೆತ್ತಿದರು. ಕಾರ್ಯಕ್ರಮದ ವೇಳೆ ಆಗಾಗ ಮೈಕ್ ಕೈಕೊಡುತ್ತಿದ್ದುದು ಅಥಿತಿಗಳಿಗೆ ಇರಿಸುಮುರಿಸು ಉಂಟುಮಾಡಿತು.