ನ್ಯೂಸ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಯಿಂದ ಪ್ರತಿಭಟನೆ

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎಐಕೆಸಿಸಿ), ಕೊಡಗು ರೈತ ಸಂಘ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್‌ವಾದಿ ಲೆನಿನ್ ವಾದಿ) ರೆಡ್‌ಸ್ಟಾರ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಇತ್ತೀಚೆಗೆ ವಿರಾಜಪೇಟೆ ತರ್ಮೆಕಾಡು ಪೈಸಾರಿಯಲ್ಲಿ ದಲಿತ ಆದಿವಾಸಿಗಳನ್ನು ಬಲತ್ಕಾರದಿಂದ ವಕ್ಕಲೆಬಿಸಿದವರ ವಿರುದ್ಧ ಕ್ರಮವಾಗಬೇಕು ಹಾಗೂ ಬ್ಯಾಡಗುಟ್ಟ, ಬಸವನಹಳ್ಳಿ ಪುನರ್ ವಸತಿಯಾದ ಜನಕ್ಕೆ ಕೃಷಿ ಭೂಮಿ ನೀಡಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಖಂಡಿಸಿ ಪ್ರತಿಭಟನಾ ನಿರತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಎಐಕೆಸಿಸಿಸಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ, ಇತ್ತೀಚಿನ ದಿನಗಳಲ್ಲಿ ಕೊಡಗಿನ ದಲಿತ ಆದಿವಾಸಿಗಳಿಗೆ, ಸರ್ಕಾರದ ಯಾವುದೇ ಸೌಲಭ್ಯಗಳು ತಲುಪುತ್ತಿಲ್ಲ. ಜನರ ಅಳಲನ್ನು ಬೇಡಿಕೆಗಳನ್ನು ಕೇಳಬೇಕಾದ ಜಿಲ್ಲಾಧಿಕಾರಿಗಳು ಜನರ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಇಲ್ಲಿನ ರಾಜಕೀಯ ಪ್ರಭಾವಿಗಳು ಜಿಲ್ಲಾಡಳಿತ ಮತ್ತು ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟಿದ್ದಾರೆ. ವಿರಾಜಪೇಟೆ ತರ್ಮೆಕಾಡು ಪೈಸಾರಿಯ ಸುಮಾರು ೮೯ ಎಕ್ರೆ ಸರ್ಕಾರಿ ಪೈಸಾರಿಯಾಗಿದ್ದು, ಅದರಲ್ಲಿ ೬೫ ಕುಟುಂಬ ಆದಿವಾಸಿ ದಲಿತರು ಸುಮಾರು ೫೦ ವರ್ಷಗಳಿಂದ ವಾಸವಿದ್ದಾರೆ. ಈ ಜಾಗದಲ್ಲೆ ಸರ್ಕಾರಿ ಕಟ್ಟಡಗಳು ಕಸ ವಿಲೇವಾರಿ ಸ್ಪಶಾನ ಎಲ್ಲವು ಇದೆ. ಆದರೆ, ಕಂದಾಯ ಇಲಾಖೆ ಮಾತ್ರ ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಘ ಪರಿವಾರಿದವರು ಸೇರಿದಂತೆ ಉಳ್ಳವರು ಕಾನೂನು ಕೈಗೆತ್ತಿಕೊಂಡು ಸಹಕಾರಿಯಾಗಿದ್ದಾರೆ ಎಂದು ದೂರಿದರು. ಇದೇ ಸಂದರ್ಭದಲ್ಲಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಇ.ಸಣ್ಣಪ್ಪ, ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾಧ್ಯಕ್ಷೆ ಪವಿತ್ರ ಹಾಜರಿದ್ದರು.