ನ್ಯೂಸ್

ವಿವಾಹಿತರಿಬ್ಬರು ಆತ್ಮಹತ್ಯೆಗೆ ಶರಣು

ಮದ್ದೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ವಿವಾಹಿತರಿಬ್ಬರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಲೂಕಿನ ಕೆ.ಬೆಳ್ಳೂರು ಗ್ರಾಮದ ಸೃಷ್ಟಿ(20) ಹಾಗೂ ಬನ್ನಹಳ್ಳಿ ಗ್ರಾಮದ ಪ್ರಸನ್ನ(25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು.

ಕೆ.ಬೆಳ್ಳೂರು ಗ್ರಾಮದ ಸೃಷ್ಟಿಯನ್ನು ಆತಗೂರು ಹೋಬಳಿ ಯರಗನಹಳ್ಳಿ ಗ್ರಾಮದ ದಿನೇಶ್ ಎಂಬುವರಿಗೆ ಒಂದೂವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತಾದರೂ ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ನಾಲ್ಕೈದು ಬಾರಿ ಜಗಳ ನಡೆದಿತ್ತು.

ಬಳಿಕ ದಿನೇಶ್ ಅವರನ್ನು ತೊರೆದ ಸೃಷ್ಟಿ, ಬನ್ನಹಳ್ಳಿಯ ಪ್ರಸನ್ನನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳೆನ್ನಲಾಗಿದ್ದು ಈ ವಿಚಾರ ಎರಡು ಕುಟುಂಬಗಳಿಗೆ ಗೊತ್ತಾದ ಹಿನ್ನೆಲೆಯಲ್ಲಿ ಸೃಷ್ಟಿ ನಾಪತ್ತೆಯಾಗಿ ತಾಲೂಕಿನ ವೈದ್ಯನಾಥಪುರ ಗ್ರಾಮದ ಶಿಂಷಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ನಾಪತ್ತೆಯಾದ ಸೃಷ್ಟಿಯನ್ನು ಪತ್ತೆ ಹಚ್ಚುವಂತೆ ಪತಿ ದಿನೇಶ್ ಕೆಸ್ತೂರು ಪೋಲೀಸರಿಗೆ ದೂರು ನೀಡಿದ್ದರು.

ಸೃಷ್ಟಿ ಆತ್ಮಹತ್ಯೆಗೆ ಶರಣಾದ ವಿಷಯ ತಿಳಿದ ಪ್ರಸನ್ನ ಬನ್ನಹಳ್ಳಿಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಎರಡು ಕುಟುಂಬಗಳು ನೀಡಿದ್ದ ದೂರಿನ ಮೇರೆಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೃಷ್ಟಿಯ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಪ್ರಸನ್ನ ಅವರ ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.