ಹುಬ್ಬಳ್ಳಿ: ಅತಿ ಹೆಚ್ಚು ಕೊಳೆಗೇರಿ ಪ್ರದೇಶ ಹೊಂದಿದ ಕ್ಷೇತ್ರವನ್ನು ಕಳೆದ 10ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ವಿರೋಧಿಗಳು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ ಎಂದು ಅಪ ಪ್ರಚಾರ ನಡೆಸಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅವರು, ಸೋಮವಾರದಂದು ಕುಲಕರ್ಣಿ ಹಕ್ಕಲ, ಜೋಪಡಿ ಚಾಳ, ಗೂಡ್ಸ್ಶೆಡ್ ರಸ್ತೆ, ತಬೀಬ್ ಲ್ಯಾಂಡ್, ಹಂಪೆ ಚಾಳ, ಲಿಮೆ ಚಾಳ, ಹಾನಗಲ್ ಚಾಳ, ಅಂಬೇಡ್ಕರ್ ಕಾಲನಿ, ಮ್ಯಾಗಜಿನ್ ಪ್ಲಾಟ್, ಮುಂತಾದ ಪ್ರದೇಶಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ವಿರೋಧಿಗಳ ಯಾವುದೇ ಪ್ರಭಾವವು ಕ್ಷೇತ್ರದ ಮೇಲೆ ಪರಿಣಾಮ ಬೀರುವುದಿಲ್ಲ. ನನ್ನ ಸೋಲು ಖಚಿತ ಎಂದು ಹೇಳುತ್ತಿರುವ ವಿರೋಧಿಗಳನ್ನೇ ಜನರು ಎರಡೆರಡು ಬಾರಿ ಸೋಲಿಸಿ ಮನೆಗೆ ಕಳುಹಿಸಿರುವುದನ್ನು ಸ್ಮರಿಸಕೊಳ್ಳಬೇಕೆಂದು ಹೇಳಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ದೋರಾಜ ಮಣಿಕುಂಟ್ಲ, ಪಾಲಿಕೆ ಮಾಜಿ ಸದಸ್ಯರಾದ ಸುಧಾ ಮಣಿಕುಂಟ್ಲ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಮುಖಂಡರಾದ ಶರೀಫ್ ಅದ್ವಾನಿ, ಅಕ್ಕಮ್ಮ ಕಂಬಳಿ, ರಾಜೇಶ್ವರಿ ಬಿಲಾನಾ, ಇನಾಯತ್ಖಾನ್ ಪಠಾಣ, ವಾದಿರಾಜ ಕುಲಕರ್ಣಿ, ಇತರರು ಇದ್ದರು.