ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಘೋಷಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಲಂಡನ್‌ಗೆ ಪ್ರಯಾಣ ಬೆಳೆಸಿರುವ ಸಾಹಿತಿ ಬಾನು ಮುಷ್ತಾಕ್ ಅವರು ವಿಮಾನದಲ್ಲಿ ತಮ್ಮ ಲಗೇಜ್ ಕಳೆದುಕೊಂಡಿದ್ದಾರೆ. ಇದರಿಂದ ಅವರಿಗೆ ಬಟ್ಟೆ ಹಾಗೂ ಮಾತ್ರೆಗಳಿಗಾಗಿ ಪರದಾಡುವ ಪ್ರಸಂಗ ಎದುರಾಗಿದೆ.
ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳನ್ನು ದೀಪಾ ಭಾಸ್ತಿ ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಈ ಪುಸ್ತಕ ಬೂಕರ್ ಪ್ರಶಸ್ತಿ ಶಾರ್ಟ್ ಲೀಸ್ಟ್‌ಗೆ ಆಯ್ಕೆಯಾಗಿದೆ. ಲಂಡನ್‌ನಲ್ಲಿ ಮೇ 20ರಂದು ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಘೋಷಣೆಯಾಗಲಿದೆ.
ಈ ಸಂಬಂಧ ಪ್ರಶಸ್ತಿ ಘೋಷಣೆ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್ ಅವರು ಮೇ 16ರಂದು ಮುಂಬಯಿಯಿಂದ ಕತಾರ್, ಅಲ್ಲಿಂದ ಲಂಡನ್‌ಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಅದರಂತೆ ಪ್ರಯಾಣ ಬೆಳೆಸಿದ ಅವರು ಲಂಡನ್ ವಿಮಾನ ನಿಲ್ದಾಣದಿಂದ ಇಳಿಯುವಾಗ ಶಾಕ್ ಕಾದಿತ್ತು. ಅವರ ಬ್ಯಾಗ್ ಕಾಣೆಯಾಗಿತ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ. ಕೊನೆಗೆ ಅಲ್ಲಿನ ವಿಮಾನ ನಿಲ್ದಾಣ ಅಧಿಕಾರಿಗೆ ದೂರು ನೀಡಿ ಲಂಡನ್‌ನ ಹೋಟೆಲ್‌ಗೆ ಬಂದಿದ್ದಾರೆ. ಬ್ಯಾಗ್ ಕಳೆದುಕೊಂಡ ವಿಚಾರವನ್ನು ತಮ್ಮ ೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ‘ಬ್ಯಾಗ್ ಮಿಸ್ ಆದರೂ ಬೂಕರ್ ಮಿಸ್ ಆಗದಿರಲಿ’ ಎಂದು ಶುಭ ಹಾರೈಸಿದ್ದಾರೆ.