ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿಯು ದೇಶಾದ್ಯಂತ ಕರೆ ನೀಡಿದ್ದ ಒಗ್ಗಟ್ಟಿನ ಮಂತ್ರ ಪ್ರದರ್ಶನಕ್ಕೆ ಬುಧವಾರ ನಗರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನಗರದ ನಾಲ್ಕೂ ವಿಮಾ ಸಂಸ್ಥೆಗಳ ಎಲ್ಲ ನೌಕರರು ಮತ್ತು ಅಧಿಕಾರಿಗಳು ಅಶೋಕ ವೃತ್ತದಲ್ಲಿನ ಯುನೈಟೆಡ್ ಇಂಡಿಯಾ ಇನ್ಷುರೆನ್ಸ್ ಕಚೇರಿ ಮುಂಭಾಗ ಜಮಾವಣೆಗೊಂಡು ವಿವಿಧ ಘೋಷಣೆ ಕೂಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಹಳೇ ಪಿಂಚಣಿ ಯೋಜನೆಯನ್ನು ಉತ್ಕೃಷ್ಟಗೊಳಿಸಬೇಕು, ಕೌಟುಂಬಿಕ ಪಿಂಚಣಿಯನ್ನು ಶೇ. 30ರಷ್ಟು ಏರಿಸಬೇಕು. ಎನ್‌ಪಿಎಸ್ ನಲ್ಲಿ ಸಂಸ್ಥೆಯ ಕೊಡುಗೆಯನ್ನು ಶೇ. 14 ಕ್ಕೆ ಏರಿಸಬೇಕು. 2022 ಆಗಸ್ಟ್‌ನಿಂದ ನನೆಗುದಿಗೆಗೆ ಬಿದ್ದಿರುವ ವೇತನ ಪರಿಷ್ಕರಣೆಯ ಮಾತುಕತೆ ಆರಂಭಿಸಬೇಕು. ನಾಲ್ಕು ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಸಂಸ್ಥೆಗಳನ್ನು ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು. ಸಮಿತಿಯ ಪದಾಧಿಕಾರಿಗಳಾದ ಎನ್.ಮಹೇಶ್, ಎಸ್.ಎಸ್.ನಾಗೇಶ್, ಗುರು ಪ್ರಕಾಶ್, ಮಲ್ಲೇಶ್, ಎಸ್.ಬಿ.ಬಲರಾಂ ಇತರರಿದ್ದರು.