ನ್ಯೂಸ್

ವಿಧಾನಮಂಡಲ ಅಧಿವೇಶನ ಇಂದು ಪುನಾರಂಭ; ಸವಾಲ್-ಜವಾಬ್​ಗೆ ವೇದಿಕೆ ಸಜ್ಜು

ಬೆಂಗಳೂರು: ಮುಂದೂಡಿದ ವಿಧಾನಮಂಡಲ ಅಧಿವೇಶನ ಶುಕ್ರವಾರದಿಂದ ಪುನಾರಂಭವಾಗಲಿದ್ದು, ಪ್ರತಿಪಕ್ಷಗಳ ಸವಾಲಿಗೆ ಆಡಳಿತ ಪಕ್ಷ ಜವಾಬು ನೀಡುವ ವೇದಿಕೆ ಸಜ್ಜಾಗಿದೆ. ‘ಮೇಕೆದಾಟು ಪಾದಯಾತ್ರೆ’ ಯಶಸ್ಸುಗೊಳಿಸಿದ ಹುರುಪಿನೊಂದಿಗೆ ಪ್ರತಿಪಕ್ಷ ಕಾಂಗ್ರೆಸ್ ತೊಡೆ ತಟ್ಟಲು ತಯಾರಾಗಿದ್ದರೆ, ಜೆಡಿಎಸ್ ಕೂಡ ತನ್ನ ಬತ್ತಳಿಕೆಯಲ್ಲಿರುವ ಹಲವು ಅಸ್ತ್ರಗಳನ್ನು ಪ್ರಯೋಗಿಸಲು ತುದಿಗಾಲ ಮೇಲೆ ನಿಂತಿದೆ. ಜನರ ನಿರೀಕ್ಷೆಗಳ ಭಾರ ಹೊತ್ತ ಬಜೆಟ್ ಮಂಡಿಸುವ ಮುಖೇನ ಆಡಳಿತರೂಢ ಬಿಜೆಪಿ ತಕ್ಕ ಉತ್ತರ ನೀಡಲು ಸನ್ನದ್ಧವಾಗಿದೆ. ಹೀಗಾಗಿ ಮಾರ್ಚ್ ಅಂತ್ಯದವರೆಗೂ ‘ರಾಜಕೀಯ ಶಕ್ತಿಸೌಧ’ ರಾಜ್ಯದ ಗಮನ ಹಿಡಿದಿಡಲಿದೆ.

ಅಪೇಕ್ಷೆಗೆ ಸ್ಪಂದನೆ: ಮುಂದುವರಿದ ಅಧಿವೇಶನ ಮಾ.4ರಿಂದ 30ರವರೆಗೆ ನಿಗದಿಯಾಗಿದೆ. ಶನಿವಾರ ಮತ್ತು ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿದರೆ, 19 ದಿನಗಳ ಕಾಲ ಕಲಾಪ ನಡೆಯಲಿದೆ. ಪ್ರತಿಪಕ್ಷ, ಆಡಳಿತ ಪಕ್ಷಗಳ ಸದಸ್ಯರ ಅಪೇಕ್ಷೆಗೆ ಸರ್ಕಾರ ಸ್ಪಂದಿಸಿ, ಈ ಅವಧಿ ನಿಗದಿಪಡಿಸಿದೆ. ಅದೇ ಕಾಲಕ್ಕೆ ‘ವಿವಾದಾತ್ಮಕ ಹೇಳಿಕೆ’ಗೆ ಕಾರ್ಯ-ಕಲಾಪ ಬಲಿಯಾಗ ದಿರಲೆಂಬ ಕಳಕಳಿಯೂ ವ್ಯಕ್ತವಾಗಿದೆ. ಸತತ ಮೂರು ವರ್ಷಗಳ ಕಾಲ ಕಾಡಿದ ಕರೊನಾ ಪಿಡುಗಿನಿಂದ ಸಂವಿಧಾನಾತ್ಮಕ ಕರ್ತವ್ಯ ನಿಭಾಯಿಸುವುದಕ್ಕೆ ಸೀಮಿತವಾಗಿ ಅಧಿವೇಶನದ ಅವಧಿ ಗೊತ್ತುಪಡಿಸಲಾಗಿತ್ತು.

ಪ್ರಶ್ನೋತ್ತರ ಜತೆಗೆ ಸಾರ್ವಜನಿಕ ಮಹತ್ವದ ವಿಷಯಗಳ ಚರ್ಚೆಗೆ ಕಾಲಾವಕಾಶ ಸಾಲದು ಎಂಬ ಕೊರಗಿನ ನಡುವೆಯೂ ಸರ್ಕಾರ ಕರೊನಾ ನಿಯಂತ್ರಣಕ್ಕೆ ಕಟ್ಟುಬಿದ್ದಿತ್ತು. ಕನಿಷ್ಠ 20 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂದು ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದರೆ, ಅಡಳಿತ ಪಕ್ಷದವರೂ ಧ್ವನಿಗೂಡಿಸಿದ್ದರು. ಈ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಮೂರನೇ ಅಲೆ ವಕ್ಕರಿಸಿದ ಕಾರಣ ಜನವರಿಯಲ್ಲಿ ಜಂಟಿ ಅಧಿವೇಶನ ಸಾಧ್ಯವಾಗಲಿಲ್ಲ. ವರ್ಷಾರಂಭದ ಮೊದಲ ಅಧಿವೇಶನ ಫೆ.14ರಿಂದ 21ರವರೆಗೆ ನಿಗದಿಯಾಗಿತ್ತು.

ರಾಜ್ಯಪಾಲರ ಭಾಷಣ, ಅಗಲಿದ ಗಣ್ಯರಿಗೆ ಸಂತಾಪ ನಂತರ ಒಂದು ದಿನದಮಟ್ಟಿಗೆ ಚರ್ಚೆ ನಡೆಯಿತಷ್ಟೇ. ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಪಕ್ಷ ಕಾಂಗ್ರೆಸ್ ಹಗಲಿರುಳು ಧರಣಿ, ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲವೆಂಬ ಸರ್ಕಾರದ ಬಿಗಿ ನಿಲುವಿನಿಂದ ಉಳಿದ ದಿನಗಳ ಸದನ ‘ಧ್ವಜ’ ಕದನಕ್ಕೆ ಆಹುತಿಯಾಯಿತು. ಕಾಂಗ್ರೆಸ್ ಹಾಗೂ ಬಿಜೆಪಿ ತಂತಮ್ಮ ನಿರ್ಧಾರಕ್ಕೆ ಅಂಟಿಕೊಂಡ ಕಾರಣ ರಾಜೀ ಸಂಧಾನದ ಪ್ರಯತ್ನಗಳು ಫಲಿಸಲಿಲ್ಲ, ಫೆ.14ರಿಂದ 25ರವರೆಗೆ ನಿಗದಿಯಾಗಿದ್ದ ಅಧಿವೇಶನ ಫೆ.22ರಂದೇ ಮುಂದೂಡಿಕೆಯಾಯಿತು. ಮಾತಿನ ಚಕಮಕಿ, ಗದ್ದಲ ಮಧ್ಯೆ ನಡೆದ ಐದು ದಿನಗಳ ಅಧಿವೇಶನದಲ್ಲಿ ಮಹತ್ವದ ಮಸೂದೆ ಗಳು ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾದದ್ದು ಗಮನಾರ್ಹ. ಈ ಪರಿಸ್ಥಿತಿಗೆ ಆಡಳಿತ-ಪ್ರತಿಪಕ್ಷಗಳ ಆರೋಪ- ಪ್ರತ್ಯಾರೋಪಗಳು ಏನೇ ಇರಲಿ. ಸದನದ ಸಮಯ ಹಾಗೂ ಸಾರ್ವಜನಿಕರ ತೆರಿಗೆ ಹಣವಂತೂ ವ್ಯರ್ಥ ಪೋಲಾಯಿತು.

ಚುನಾವಣೆ ಛಾಯೆ ವಾಕ್ಸಮರ ಸಾಧ್ಯತೆ: ‘ಚುನಾವಣಾ ಬಜೆಟ್’ ಎಂದು ಸಿಎಂ ಬೊಮ್ಮಾಯಿ ನೀಡಿದ ಸುಳಿವು, ಉತ್ತರಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇದೇ ವೇಳೆ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಛಾಯೆ ‘ಮಾತಿನ ಮಂಟಪ’ವನ್ನು ಆವರಿಸಿಕೊಳ್ಳಲಿದ್ದು, ವಾಕ್ಸಮರ ಹಾಗೂ ಏಟು-ಎದಿರೇಟುಗಳಲ್ಲಿ ಇಣುಕುವ ಸಾಧ್ಯತೆಗಳಿವೆ. ಹಿಂದುಳಿದ ವರ್ಗಗಳ ಮೀಸಲು ರದ್ದುಪಡಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಪರ್ಯಾಯ ಪರಿಹಾರ ಕ್ರಮಗಳಿಗೆ ಒತ್ತಡ ಹೇರುವ ಸಂಭವವಿದೆ. ತಾಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆ ಜತೆಗೆ ಅವಧಿಪೂರ್ವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಚರ್ಚೆಗಳು ಸುಳಿಯಲಿವೆ. ಹಿಂದಿನ ಕಹಿ ಅನುಭವದ ಹಿನ್ನೆಲೆಯಲ್ಲಿ ಪುನಾರಂಭವಾಗುವ ಅಧಿವೇಶನದಲ್ಲಿ ಕಾರ್ಯ-ಕಲಾಪ ಸುಸೂತ್ರವಾಗಿ ನಡೆಯಲೆಂದು ರಾಜ್ಯದ ಜನರು ಬಯಸಿದ್ದಾರೆ.