ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಮ ಸಮಾಜದ ನಿರ್ಮಾಣ ಮಾಡಲು ಸಾದ್ಯ. ಎಲ್ಲರೂ ಶಿಕ್ಷಣ ಪಡೆಯಬೇಕು. ಸಮಾನ ಅವಕಾಶಗಳನ್ನು ನೀಡಿ ಎಲ್ಲರಿಗೂ ಶಕ್ತಿ ನೀಡಲು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಮಾನಸ ಗಂಗೋತ್ರಿಯ ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ವಿಶ್ವ ಜ್ಞಾನಿಗಳಾಗಿದ್ದರು. ಆದ್ದರಿಂದ ವಿಶ್ವಜ್ಞಾನಿ ಅಂಬೇಡ್ಕರ್ ಸಭಾಂಗಣ ಎಂದು ನಿರ್ದಿಷ್ಟವಾಗಿ ಬರೆಯಲು ಸಲಹೆ ನೀಡಿದ್ದೇನೆ. ಸಮಾಜವನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡಿದ್ದ ವಿಶ್ವ ಜ್ಞಾನಿ ಅಂಬೇಡ್ಕರ್. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇರಲಿಲ್ಲ. ಆದ್ದರಿಂದ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಯಿತು. ಅಂಬೇಡ್ಕರ್ ಅವರು ತಾವು ಕಲಿತ ವಿದ್ಯೆಯನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಿದ್ದಾರೆ. ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬರುತ್ತದೆ. ಅಂದು ನಾವು ವೈರುಧ್ಯತೆ ಇರುವ ಸಮಾಜಕ್ಕೆ ಕಾಲು ಇಡುತ್ತೇವೆ ಎಂದು ಸಂವಿಧಾನ ಅಂಗೀಕಾರ ಸಭೆಯಲ್ಲಿ ತಿಳಿಸಿದ್ದರು. ಇಂದು ಸಹ ಸಮಾಜದಲ್ಲಿ ವೈರುಧ್ಯತೆ ಇದೆ. ಆದರೆ ಇಂದು ಸ್ವಲ್ಪ ಕಡಿಮೆ ಆಗಿದೆ. 10 ಸಂಪುಟಗಳಲ್ಲಿ ಇರುವ ಭಾರತ ಸಂವಿಧಾನವನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದೇನೆ. ಎಲ್ಲರೂ ಅದನ್ನು ಓದಬೇಕು. ಅಂಬೇಡ್ಕರ್ ಅವರು ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನವನ್ನು ಓದಿ ನಮ್ಮ ದೇಶಕ್ಕೆ ಅಗತ್ಯವಾದ ಸಂವಿಧಾನವನ್ನು ರಚನೆ ಮಾಡಿ ನೀಡಿದ್ದಾರೆ. ನಮ್ಮದು ಶ್ರೇಷ್ಠ ಸಂವಿಧಾನ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಬಾಬಾ ಸಾಹೇಬ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಸ್ಥಾಪನೆ ಮಾಡಿದ್ದೇನೆ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರಲು ಸಾಧ್ಯವಿಲ್ಲ. ಆದ್ದರಿಂದ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕು. ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಅದಕ್ಕೆ ಚಲನೆ ಇಲ್ಲ. ಇದು ಆಳವಾಗಿ ಬೇರು ಬಿಟ್ಟಿದೆ. ಬಸವಣ್ಣ ಅವರು ಜಾತಿ ವ್ಯವಸ್ಥೆ ತೊಡೆದು ಹಾಕುವಂತೆ 850 ವರ್ಷಗಳ ಹಿಂದೆಯೇ ಹೇಳಿದ್ದರು. ಆದರೂ ಅದು ಇನ್ನೂ ಸಾಧ್ಯವಾಗಿಲ್ಲ. ಇನ್ನು ಮೇಲು ಕೀಳು ಬಡವ ಬಲ್ಲಿದ ಎಂಬ ಅಸಮಾನತೆ ಇನ್ನೂ ಹಾಗೇ ಇದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಜಾತಿ ವ್ಯವಸ್ಥೆ ಇನ್ನೂ ಇದೆ ಇದು ತಲೆ ತಗ್ಗಿಸುವಂತಹ ಸಂಗತಿ. ನಾನು ಅಂಬೇಡ್ಕರ್ ವಾದದಲ್ಲಿ, ಬಸವಣ್ಣನವರ ತತ್ವದಲ್ಲಿ, ಗೌತಮ ಬುದ್ಧ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಾವು ಸ್ವಾಭಿಮಾನಿಗಳು ಆಗಬೇಕು. ಗುಲಾಮಗಿರಿಯನ್ನು ತೊಡೆದು ಹಾಕಬೇಕು ಎಂದರು.
ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳು ಸಾಕ್ಷ್ಯ ಚಿತ್ರವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಬಿಡುಗಡೆ ಮಾಡಿ ಮಾತನಾಡಿದ ಅವರು ಮೈಸೂರು ವಿಶ್ವ ವಿದ್ಯಾಲಯ ವಿಶ್ವದ ಶ್ರೇಷ್ಠ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ. ಇದರಲ್ಲಿ ದೇಶದ ಮೊದಲ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್, ರಾಷ್ಟ್ರ ಕವಿ ಕುವೆಂಪು ಅವರು ಸಹ ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿದರು.
ವಿಶ್ವ ವಿದ್ಯಾನಿಲಯ ಚಿಂತನೆಗಳ ಚಿಲುಮೆ. ಕುವೆಂಪು ಅವರು ಮೈಸೂರು ವಿಶ್ವ ವಿದ್ಯಾಲಯದ ಕುಲ ಪತಿಗಳು ಆಗಿದ್ದ ಕಾಲದಲ್ಲಿ ಸಂಧರ್ಭದಲ್ಲಿ ವಿಶ್ವ ವಿದ್ಯಾಲಯಕ್ಕೆ ಅನೇಕ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಿದರು. ವಿಶ್ವ ವಿದ್ಯಾನಿಲಯಗಳು ಸಮ ಸಮಾಜದ ನಿರ್ಮಾಣ ಮಾಡುವ ಜ್ಞಾನ ಕಣಜಗಳಾಗಿ ಬೆಳೆಯಬೇಕು. ಲಾರ್ಡ್ ಮೌಂಟ್ ಬ್ಯಾಟನ್ ಅವರು ಗಾಂಧೀಜಿಯವರನ್ನು ಕುರಿತು ನಾನು ಭಾರತದಲ್ಲಿ ಒಬ್ಬ ದೇವರನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.