ಪಿರಿಯಾಪಟ್ಟಣ: ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ ಪೋಕ್ಸೋ ಕಾಯ್ದೆ ಜಾರಿಗೆ ತರಲಾಯಿತು ಎಂದು ಪಟ್ಟಣ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಮಿವುಲ್ಲಾ ತಿಳಿಸಿದರು.
ಶಿಕ್ಷಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಸೋಮವಾರ ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪೋಕ್ಸೋ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕೆಲವೊಂದು ಘಟನೆಗಳಿಂದಾಗಿ ಮನೆಯ ಹೊರಗೆ ಮತ್ತು ಒಳಗೆ ಸುರಕ್ಷಿತವಿಲ್ಲ ಎಂಬ ಭಾವನೆ ಹೆಣ್ಣುಮಕ್ಕಳಲ್ಲಿ ಮೂಡುತ್ತಿದೆ. ಇದನ್ನು ಹೋಗಲಾಡಿಸಿ ನಿರ್ಭೀತಿಯಿಂದ ವಿದ್ಯಾರ್ಥಿನಿಯರು ಆಟ, ಪಾಠ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಹ ವಾತಾವರಣ ನಿರ್ಮಿಸಬೇಕಿದೆ ಎಂದರು.
ಅಪಘಾತದಿಂದ ಮೃತಪಟ್ಟ ಕುಟುಂಬದವರಿಗೆ ವಿಮಾ ಕಂಪನಿಯಿಂದ ಲಕ್ಷಾಂತರ ರೂ. ಪರಿಹಾರ ದೊರೆಯಲಿದ್ದು, ಕಡ್ಡಾಯವಾಗಿ ವಾಹನ ವಿಮೆ ಹೊಂದಿರಬೇಕು ಎಂದ ಅವರು, ಬಾಲಕಾರ್ಮಿಕ ಪದ್ಧತಿ ಕಂಡು ಬಂದರೆ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರಬೇಕು ಆಗ ಮಾತ್ರ ಪದ್ಧತಿಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಯೋಮಿತಿಗೂ ಮುನ್ನ ವಿವಾಹವಾಗುವುದು, ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಭವಿಷ್ಯ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುತ್ತ ಗಮನಹರಿಸಲಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಸತೀಶ್, ಖಜಾಂಚಿ ಬಿ.ಜೆ.ಮಾದೇಗೌಡ, ಬಿಇಒ ಬಸವರಾಜು, ಬಿಆರ್‌ಸಿಗಳಾದ ಶಿವರಾಜ್,ಶ್ರೀನಿಧಿ ಮತ್ತಿತರರು ಹಾಜರಿದ್ದರು.