ನ್ಯೂಸ್

ವಿದ್ಯಾರ್ಥಿಗಳು ಸಾಧನೆ ಕಡೆ ಗಮನಹರಿಸಲಿ

ವಿದ್ಯಾರ್ಥಿಗಳು ಸಾಧನೆ ಕಡೆಗೆ ಗಮನಹರಿಸಬೇಕು ಎಂದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಸದಾಶಿವೇಗೌಡ ಸಲಹೆ ನೀಡಿದರು.

ನಗರದ ಗೋಕುಲಂನಲ್ಲಿರುವ ವಿದ್ಯಾವರ್ಧಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಶಿಷ್ಟ-2025 ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಏನು ಕೊಡುಗೆ ನೀಡದೆ ಸುಮ್ಮನೆ ವ್ಯವಸ್ಥೆಯನ್ನು ಶಪಿಸಬಾರದು. ನಮಗೆ ಸಮಾಜ ಏನು ಕೊಟ್ಟಿದೆ ಎಂಬುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಪ್ರತಿಯೊಂದು ಸಾಧನೆಗೆ ಶ್ರದ್ಧೆ, ಶ್ರಮ, ವಿವೇಚನೆ, ಕಲಿಕೆ ಮುಖ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ಕೌಶಲಗಳನ್ನು ಬೆಳೆಸಿಕೊಂಡು, ಜೀವನದಲ್ಲಿ ಸಾಧನೆ ಮಾಡಬೇಕು. ಆ ಮೂಲಕ ಓದಿದ ಕಾಲೇಜಿಗೂ ಪಾಲಕರಿಗೂ ಕೀರ್ತಿ ತರಬೇಕು. ಇಂದು ಅಮೆರಿಕ ದೇಶವು ಎಲ್ಲಾ ದೇಶಗಳಿಗೂ ಅಧಿಕ ಸುಂಕ ವಿಧಿಸುತ್ತಿದೆ. ಆದರೆ, ಇದನ್ನು ಯಾರು ಪ್ರಶ್ನಿಸದಂತಾಗಿದ್ದು, ಒಪ್ಪಿಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಕಾರಣ ಅಮೆರಿಕ ಪ್ರಬಲ ದೇಶ. ಹಾಗೆಯೇ ನಾವು ಸಹ ಭಾರತವನ್ನು ಅಷ್ಟೇ ಪ್ರಬಲ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.

ಭಾರತದಲ್ಲಿ ಬೆರಳಣಿಕೆ ವಿದ್ಯಾರ್ಥಿಗಳು ಮಾತ್ರ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲೂ ಪಾಲಿಟೆಕ್ನಿಕ್ ನಂತರ ಇಂಜಿನಿಯರಿಂಗ್ ಆಯ್ದುಕೊಳ್ಳುವವರ ಸಂಖ್ಯೆ ತೀರಾ ಕಡಿಮೆ ಇದೆ. ಭಾರತದ ಜಿಡಿಪಿ ಹೆಚ್ಚಾಗುತ್ತಿದ್ದು, ಬೇರೆ ಯಾವ ರಾಷ್ಟ್ರಗಳು ಇಷ್ಟು ವೇಗದಲ್ಲಿ ಬೆಳೆಯಲೂ ಸಾಧ್ಯವಾಗುತ್ತಿಲ್ಲ. ಇಂತಹ ಅಭಿವೃದ್ಧಿಯ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿದ್ಯಾವರ್ಧಕ ಸಂಘ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್ ಇತರರು ಇದ್ದರು.