ಮೈಸೂರು : ಓದುವ ಹವ್ಯಾಸ ರೂಢಿಸಿಕೊಂಡಲ್ಲಿ ನಿಮ್ಮ ಪಕ್ಕದ ವ್ಯಕ್ತಿಗಿಂತ ನೀವು ಭಿನ್ನವಾಗಿ ನಿಲ್ಲಬಲ್ಲರಿ ಎಂದು ಖ್ಯಾತ ಕಲಾವಿದೆ, ಗಾಯಕಿ ಡಾ.ಶ್ವೇತಾಮಡಪ್ಪಾಡಿ ಅಭಿಪ್ರಾಯಪಟ್ಟರು.
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಸಮಿತಿ ಮತ್ತು ಮಹಿಳಾ ಸಬಲೀಕರಣ ಘಟಕದ ಸಹಯೋಗದಲ್ಲಿ 5 ದಿನಗಳ ಹಮ್ಮಿಕೊಂಡಿರುವ ಮಹಿಳಾ ಹಬ್ಬ ವುಮೆನ್ ಫೆಸ್ಟ್ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಇಂದು ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಅಧ್ಯಯನ ವ್ಯಕ್ತಿಯನ್ನು ಪರಿಪೂರ್ಣತೆಗೆ ಕರೆದೊಯ್ಯುತ್ತದೆ. ಅದು ನಿಮ್ಮನ್ನು ಇತರರೆಲ್ಲರಗಿಂತ ಭಿನ್ನವಾಗಿ ನಿಲ್ಲಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ತಮಾಷೆ ಕೇವಲ ಮನೋರಂಜನೆಗಾಗಿ ಎನ್ನುವುದನ್ನು ತಿಳಿಯಿರಿ. ಮತ್ತೊಬ್ಬರನ್ನು ತಮಾಷೆ ಮಾಡುತ್ತಲೇ ಕಾಲಕಳೆದರೆ ಮುಂದಿನ ದಿನಗಳಲ್ಲಿ ಸಮಾಜ ನಿಮ್ಮನ್ನು ನೋಡಿ ನಗುವಂತಾಗುವ ಪರಿಸ್ಥಿತಿ ಬಂದೀತು, ಎಚ್ಚರವಹಿಸಿ. ಹೆಣ್ಣುಮಕ್ಕಳಿಗೆ ಇಂದು ಸ್ವಾತಂತ್ರ್ಯ ದೊರಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿರಿ. ಬದುಕನ್ನು ಎದುರಿಸುವ ಧೈರ್ಯ, ಗಟ್ಟಿತನ ನಿಮ್ಮಲ್ಲಿರಲಿ. ಸತ್ಯ ಮತ್ತು ನಾಲ್ಕು ಜನರಿಗೆ ಉಪಯೋಗುವ ಕಾರ್ಯವನ್ನು ಎದೆಗುಂದದೆ ಮಾಡಿರಿ. ಅದರಲ್ಲಿ ಎಂದಿಗೂ ಗೆಲುವು ಖಚಿತವೆಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, 5 ದಿನ ಈ ಹಬ್ಬ ನಿಮ್ಮಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭೆಯನ್ನು ಹೊರತರಲು ನೀಡಿರುವ ಉತ್ತಮ ವೇದಿಕೆಯಾಗಿದ್ದು, ಇದರ ಸದ್ಬಳಕೆ ನಿಮ್ಮಿಂದಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಪುಟ್ಟಶೆಟ್ಟಿ ವಿದ್ಯಾರ್ಥಿನಿಯರಿಗೆ ಶುಭಕೋರಿದರು. ಸಿಡಿಸಿ ಸದಸ್ಯರಾದ ಜ್ಯೋತಿ ವಿಶ್ವನಾಥ್, ಶಿವಕುಮಾರ್.ವಿ.ರಾವ್, ರಾಜಶೇಖರ್, ಶ್ರೀನಾಥ್, ಪ್ರದೀಪ್, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ.ಕಾವ್ಯಾ, ಪ್ರಾಧ್ಯಾಪಕರುಗಳಾದ ಡಾ.ಕೆ.ಪಿ.ಪ್ರಸನ್ನ, ಡಾ.ನಂಜುಂಡಸ್ವಾಮಿ, ದೀಪುಕುಮಾರ್, ಡಾ.ಶ್ರೀನಿವಾಸ್, ಡಾ.ಕೆ.ಎಸ್.ಭಾಸ್ಕರ್, ಡಾ.ರಮಣಿನಾಯಕ್, ಪ್ರತಿಭಾ ಜೆನ್ನಿಫರ್, ರಾಜಿಯಾ ಸುಲ್ತಾನ್, ಡಾ.ಪುಷ್ಪಲತಾ, ಡಾ.ಎನ್.ಕರುಣಾಕರ್ ಇತರರು ಇದ್ದರು.
ಮನಸೂರೆಗೊಂಡ ಉದ್ಘಾಟನಾ ಕಾರ್ಯಕ್ರಮ: ಮಹಿಳಾ ಹಬ್ಬವನ್ನು ಉದ್ಘಾಟಿಸಿದ ಪರಿ ಎಲ್ಲರ ಮನಸೂರೆಗೊಂಡಿತು. ಮುಖ್ಯ ಅತಿಥಿ ಡಾ.ಶ್ವೇತಾ ಮಡಪ್ಪಾಡಿಯವರನ್ನು ವಿದ್ಯಾರ್ಥಿನಿಯರು ಕಾಲೇಜಿನ ಪ್ರಮುಖದ್ವಾರದಲ್ಲಿ ದೀಪ ಬೆಳಗಿ ಹಣೆಗೆ ತಿಲಕವಿಟ್ಟು ಸ್ವಾಗತಿಸಿದರು. ನಂತರ ಮುಖ್ಯ ಅತಿಥಿಗಳು ಮತ್ತು ಗಣ್ಯರನ್ನು ಎತ್ತಿನಗಾಡಿಯ ಮೂಲಕ ವೇದಿಕೆಗೆ ಕರೆತರಲಾಯಿತು. ಈ ವೇಳೆ ಡೊಳ್ಳು, ನಗಾರಿಗಳನ್ನು ನುಡಿಸಲಾಯಿತು. ವೇದಿಕೆ ಕಾರ್ಯಕ್ರಮವನ್ನು ಡಾ.ಶ್ವೇತಾಮಡಪ್ಪಾಡಿ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಕಾಲೇಜಿನ ಐವರು ವಿದ್ಯಾರ್ಥಿನಿಯರು ಯಕ್ಷಗಾನ ವೇಷಧಾರಿಗಳಾಗಿ ಕಾಂತಾರ ಚಿತ್ರದ ವರಾಹರೂಪಂ ಹಾಡಿಗೆ ಹೆಜ್ಜೆಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ ವಿದ್ಯಾರ್ಥಿನಿಯರ ಮತ್ತೊಂದು ತಂಡ ಕಂಸಾಳೆ ನೃತ್ಯದೊಂದಿಗೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.
3ಊಓ1:ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ಹಬ್ಬ ಕಾರ್ಯಕ್ರಮವನ್ನು ಡಾ.ಶ್ವೇತಾ ಮಡಪ್ಪಾಡಿ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಸಿಡಿಸಿ ಉಪಾಧ್ಯಕ್ಷ ಮೋದೂರು ಮಹೇಶಾರಾಧ್ಯ, ಸದಸ್ಯ ಜ್ಯೋತಿ ವಿಶ್ವನಾಥ್, ಪ್ರಾಂಶುಪಾಲ ಪುಟ್ಟಶೆಟ್ಟಿ, ಡಾ.ಕಾವ್ಯ, ಪ್ರತಿಭಾ ಜೆನ್ನಿಫರ್ ಇತರರಿದ್ದಾರೆ.
3ಊಓ2:ಯಕ್ಷಗಾನ ವೇಷಧಾರಿಗಳ ಆಕರ್ಷಕ ನೃತ್ಯ