ನ್ಯೂಸ್

ವಿದ್ಯಾರ್ಥಿಗಳಿಂದ ವಿಜ್ಞಾನದ ಕೌತುಕ ಅನಾವರಣ

ಚಾಮರಾಜನಗರ : ಪೇಪರ್ ಪಾತ್ರೆಯಲ್ಲಿ ನೀರು ಕಾಯಿಸುವುದನ್ನು ಕಂಡು ಆಶ್ಚರ್ಯಗೊಂಡ ವಿದ್ಯಾರ್ಥಿಗಳು… ಹವಮಾನ ವೈಪರೀತ್ಯ ಪರಿಣಾಮ… ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ಸೂತ್ರಗಳು ದಾಖಲು… ಗಣಿತ, ಸಸ್ಯಶಾಸ ಹಾಗೂ ವಿಜ್ಞಾನದ ಹಲವು ಪ್ರಯೋಗಗಳಿಗೆ ಸಾಕ್ಷಿಯಾದ ವಿಜ್ಞಾನ ಮೇಳ…

ನಗರದ ರಾಮಸಮುದ್ರ ಬಡಾವಣೆ ಸಮೀಪದಲ್ಲಿರುವ ದೀನಬಂಧು ಶಾಲೆಯಲ್ಲಿ ಸಂಸ್ಥಾಪಕ ಜಯದೇವ್ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ 60ಕ್ಕಿಂತಲೂ ಹೆಚ್ಚು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಖಾಸಗಿ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ, ದೀನಬಂಧು ಶಾಲೆಯ ವಿದ್ಯಾರ್ಥಿಗಳು ಮಾಡಿದ ಹಲವು ವಿಜ್ಞಾನದ ಪ್ರಯೋಗಗಳನ್ನು ಕಂಡು ಹರ್ಷ ವ್ಯಕ್ತಪಡಿಸಿದರು.

ಹವಮಾನ ವೈಪರೀತ್ಯ ಪರಿಣಾಮಗಳನ್ನು ಬಿಂಬಿಸುವ ಪ್ರಾತ್ಯಕ್ಷಿಕೆ, ಹಸಿರು ಮನೆ ಅನಿಲದ ಪರಿಣಾಮ, ಹಸಿರು ಜಲಜನಕ ಹೇಗೆ ಬಿಡುಗಡೆಗೊಳ್ಳುತ್ತದೆ, ವಿಷಕಾರಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಹಾಗೂ ಮರುಬಳಕೆ ವಿಧಾನವನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿವರಿಸಿದರು. ಜಲತರಂಗ, ಧ್ವನಿ ದೃಶೀಕರಣ, ಪೇಪರ್ ಪಾತ್ರೆಯಲ್ಲಿ ನೀರು ಕಾಯಿಸುವುದು, ಉಷ್ಣ ಮತ್ತು ದಹನ ಸಂವಹನ, ಗಾಳಿ ಮತ್ತು ಬೆಳಕಿನ ವಿವಿಧ ಪ್ರಯೋಗಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬಹಳ ಕುತೂಹಲದಿಂದ ನೋಡುತ್ತಿದ್ದರು. ಗಣಿತ ವಿಭಾಗದಲ್ಲಿ ಮೋಜುಗಾರ ಗಣಿತ ಹಾಗೂ ಸೊಗಸುಗಾರ ಗಣಿತ ಎಂಬ ವಿಭಿನ್ನ ಹೆಸರುಗಳನ್ನು ಇಟ್ಟು ಹಲವು ಪ್ರಯೋಗಗಳನ್ನು ಮಾಡುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.

ಸಸ್ಯಶಾಸ ಮತ್ತು ಜೀವಶಾಸದ ಕುರಿತು ಕೌತುಕದ ವಿಷಯಗಳನ್ನು ವಿದ್ಯಾರ್ಥಿಗಳು ಅರಿತುಕೊಂಡರು. ಶಾಲಾ ಆವರಣದಲ್ಲಿ ರಾಸಾಯನಶಾಸ, ಭೌತಶಾಸ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಪ್ರಯೋಗಗಳಿಗೆ ಮಕ್ಕಳು ಬೆರಗಾಗಿ ಚಪ್ಪಾಳೆ ತಟ್ಟುತ್ತಿದ್ದರು. ಹಣ್ಣುಗಳಲ್ಲಿ ಮನೆ ನಿರ್ಮಾಣ, ಸೈನ್ಸ್ ಪಾರ್ಕ್ ಮತ್ತು ಗ್ಯಾಲರಿ ಹಾಗೂ ಟಿಆರ್‌ಸಿ ಚಟುವಟಿಕೆಗಳು ಮತ್ತಷ್ಟು ಮಕ್ಕಳ ಕುತೂಹಲಕ್ಕೆ ಸಾಕ್ಷಿಯಾಯಿತು. ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯಗಳು ಲಭ್ಯವಿರುವುದಿಲ್ಲ. ಹಾಗಾಗಿ ಇಂತಹ ವಿಜ್ಞಾನ ಮೇಳಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಿದರೆ ಮಕ್ಕಳ ಮನೋವಿಕಾಸಕ್ಕೆ ಅನುಕೂಲವಾಗುತ್ತದೆ ಎಂದು ಶಿಕ್ಷಕ ಮನೋಜ್ ಮಸೂ ವಿಜಯವಾಣಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಡಿಸ್ಟಿಂಗ್‌ವಿಶ್ಡ ಪ್ರಾಡಕ್ಟ್ ಮ್ಯಾನೇಜರ್ ಡಾ.ಮೆಲ್ಲಿ ಅಣ್ಣಾಮಲೈ, ದೀನಬಂಧು ಶಿಕ್ಷಕ ಸಂಪನ್ಮೂಲ ಕೇಂದ್ರದ ಯೋಜನಾ ಸಂಯೋಜಕ ಕೇತನ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ, ದೀನಬಂಧು ಸಂಸ್ಥೆಯ ಅಧ್ಯಕ್ಷ ಡಾ.ಆರ್.ಎಸ್.ನಾಗಾರ್ಜುನ್, ಶಿಕ್ಷಕರಾದ ರಘು, ಶೈಲೇಂದ್ರನಾಗ್, ಕಿರಣ್‌ಗಿರ್ಗಿ, ಚಾಂದಿನಿ ಇತರರು ಉಪಸ್ಥಿತರಿದ್ದರು.

ಬೆಳಕು, ಗಾಳಿ, ಬೆಂಕಿ ಇನ್ನಿತರ ವಸ್ತಗಳನ್ನು ಬಳಸಿಕೊಂಡು ಮಾಡಿದ್ದ ಸಾಕಷ್ಟು ಪ್ರಯೋಗಗಳು ತುಂಬ ಇಷ್ಟವಾದವು. ನಾವು ಶಾಲೆಯಲ್ಲಿ ಓದಿರುವ ವಿಷಯಗಳನ್ನು ಪ್ರಯೋಗಿಕವಾಗಿ ನೋಡುವುದರಿಂದ ಕಲಿಕೆಗೆ ತುಂಬ ಅನುಕೂಲವಾಗುತ್ತದೆ.ಸತ್ಯಾ, 7ನೇ ತರಗತಿ, ಸರ್ಕಾರಿ ಪ್ರಾಥಮಿಕ ಶಾಲೆ, ಕೋಡಿಮೋಳೆ ಸಾಕಷ್ಟು ಸುಲಭ ಹಾಗೂ ಹಲವು ಕಠಿಣ ಪ್ರಯೋಗಗಳ ಬಗ್ಗೆ ಮಾಹಿತಿ ದೊರೆಯಿತು. ವಿಜ್ಞಾನ, ಗಣಿತ ಇನ್ನಿತರ ವಿಷಯಗಳ ಕೌತುಕಗಳು ಅನಾವರಣಗೊಂಡವು. ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಿದರೆ ನಮ್ಮ ಕಲಿಕೆಗೆ ಸಾಕಷ್ಟು ನೆರವಾಗುತ್ತದೆ.ಹರ್ಷ, 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ದೊಡ್ಡರಾಯಪೇಟೆ