ವಿಜಯವಾಣಿ ಸುದ್ದಿಜಾಲ ಗದಗ
ಶತಮಾನೋತ್ಸವ ಕಂಡಿರುವ ಬೆಳಗಾವಿಯ ಕೆಎಲ್‍ಇ, ಬಾಗಲಕೋಟಿಯ ಬಸವೇಶ್ವರ ವಿದ್ಯಾವರ್ಧಕ ಸಂಘ, ವಿಜಯಪುರದ ಬಿಎಲ್‍ಡಿ ಸಂಸ್ಥೆಯ ಸಾಲಿಗೆ ನಗರದ ವಿದ್ಯಾದಾನ ಸಮಿತಿ ಸೇರಿದ್ದು ಹೆಮ್ಮೆಯ ಸಂಗತಿಯಾಗಿದ್ದು, `ವಿದ್ಯಾದಾನ ಸಮಿತಿ ಶತಮಾನೋತ್ಸವ ಸಂಭ್ರಮ`ವನ್ನು ಅತ್ಯಂತ ಅದ್ದೂರಿಯಾಗಿ ಅರ್ಥಪೂರ್ಣ ಆಚರಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಆರ್‍ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.
ನಗರದ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾದಾನ ಸಮಿತಿ ಶತಮಾನೋತ್ಸವ ಸಂಭ್ರಮ` ಆಚರಿಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಉತ್ತರ ಕರ್ನಾಟಕ ಹಲವಾರು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದು, ಇದರ ಹಿಂದೆ ಅಪಾರ ಪರಿಶ್ರಮವಿದೆ. ಸ್ವಂತ ಆಸ್ತಿಯನ್ನು ಮಾರಾಟ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಹಣ ನೀಡಿ ಬೆಳೆಸಿದ ಇತಿಹಾಸ ನಮಗೆ ಗೊತ್ತಿರುವ ಸಂಗತಿಯಾಗಿದೆ. ಹೀಗೆ ಕಷ್ಟದ ಸಂದರ್ಭದಲ್ಲಿ ಆರಂಭವಾದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಜಗತ್ತು ತಿರುಗಿ ನೋಡುವಂತಾಗಿದೆ ಎಂದರು.ಶಿಕ್ಷಣ ಸಂಸ್ಥೆಗಳ ಕುರಿತು ಮಾತನಾಡಿದಾಗ ಕರ್ನಾಟಕದ ಹೆಸರು ಮುಂಚೂಣಿಯಲ್ಲಿರುತ್ತದೆ. ಅಷ್ಟರ ಮಟ್ಟಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿ ಹೆಮ್ಮರವಾಗಿ ಬೆಳೆದು ಇದೀಗ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಖುಷಿ ಸಂಗತಿಯಾಗಿದೆ ಎಂದರು.ವಿದ್ಯಾದಾನ ಸಮಿತಿ ನೂರರ ಸಂಭ್ರಮಕ್ಕೆ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ನೂರರ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಬೇಕಿದ್ದು, ಸಂಭ್ರಮದ ಹಿನ್ನೆಲೆಯಲ್ಲಿ ದ.ರಾ.ಬೇಂದ್ರೆ, ಕೀರ್ತಿನಾಥ ಕುರ್ತಕೋಟಿ ಅವರಂತಹ ಮಹನೀಯ ಕುರಿತು ಸೆಮಿನಾರ್, ಕಾರ್ಯಾಗಾರಗಳನ್ನು ಆಯೋಜಿಸಬೇಕು. ಸಂಭ್ರಮದ ನೆನಪಿಗಾಗಿ ಕಟ್ಟಡ ಕಟ್ಟುವುದರ ಜತೆಗೆ ವಿದ್ಯಾದಾನ ಸಮಿತಿ ಅಭಿವೃದ್ಧಿಗೂ ಚಿಂತನೆ ನಡೆಸಬೇಕು. ಆ ನಿಟ್ಟಿನಲ್ಲಿ ಸಂಘಟಕರು ಮುಂದಾಗಲಿ, ಈ ಕಾರ್ಯಕ್ಕೂ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಹೇಳಿದರು.
ಹುಯಿಲಗೋಳ ನಾರಾಯಣರಾಯರ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಹಾಕಿಕೊಳ್ಳಬೇಕಿದೆ ಎಂದು ಹೇಳಿದರು.
ಕೆಎಲ್‍ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ರಾಣಿ ಚನ್ನಮ್ಮ ವಿವಿ ವಿಶ್ರಾಂತ ಕುಲಸಚಿವ, ಕೆಪಿಎಸ್‍ಸಿ ಸದಸ್ಯ ಎಚ್.ಡಿ.ಪಾಟೀಲ, ಉದ್ಯಮಿ ಬಲವಂತರಾವ ಪಾಟೀಲ, ಕವಿತಾ ಕಾಶಪ್ಪನವರ, ರುದ್ರಣ್ಣ ಗುಳಗುಳಿ, ಡಾ.ಧನೇಶ ದೇಸಾಯಿ, ಡಾ. ಅನಂತ ಶಿವಪೂರ, ದೀಪಕ್ ಶೆಟ್ಟಿ, ಅಶೋಕ ಉಮಚಗಿ, ಲತಾ ಮುತ್ತಿನಪೆಂಡಿಮಠ, ಭೀಮಸಿಂಗ್ ರಾಠೋಡ, ಗುರುರಾಜ ಬಳಗಾನೂರ ಮಾತನಾಡಿ, ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ, ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅವರು ಶತಮಾನೋತ್ಸವ ಸಂಭ್ರಮ ಸಿದ್ಧತೆ ಹಾಗೂ ರೂಪುರೇಷೆ ಕುರಿತು ವಿವರಿಸಿದರು.ಸ್ಮರಣ ಸಂಚಿಕೆ ಸಿದ್ಧತೆ ಕುರಿತು ಮಾತನಾಡಿದ ಜೆ.ಕೆ.ಜಮಾದಾರ, ವಿದ್ಯಾದಾನ ಸಮಿತಿಯಲ್ಲಿ ವ್ಯಾಸಂಗ ಮಾಡಿರುವ ಹಳೇ ವಿದ್ಯಾರ್ಥಿಗಳು ಲೇಖನ ಕಳಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಡಾ.ಅನಂತ ಶಿವಪೂರ ಅವರು 1,11,111 ರೂ. ದೇಣಿಗೆ ನೀಡಿದರು.
ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ ವಂದಿಸಿದರು.