ನ್ಯೂಸ್

ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಬೆಳಿಸಿಕೊಳ್ಳಿ

ಚಾಮರಾಜನಗರ : ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿ.ದೀಪಾ ಸಲಹೆ ನೀಡಿದರು.

ತಾಲೂಕಿನ ಕಾಳನಹುಂಡಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪರಿಸರದಲ್ಲಿ ಕುತೂಹಲಕರವಾದ ಅಂಶಗಳನ್ನು ಪ್ರಶ್ನಿಸುವ ಆಸಕ್ತಿಯನ್ನು ಬೆಳೆಸಿಕೊಂಡರೆ ಸರ್.ಸಿ.ವಿ.ರಾಮನ್ ಅವರ ರೀತಿಯಲ್ಲೇ ವಿಜ್ಞಾನಿಗಳಾಗಬಹುದು. ವಿಜ್ಞಾನವನ್ನು ಎಲ್ಲರೂ ಕಷ್ಟ ಎಂದು ಹೇಳುತ್ತಾರೆ, ಆದರೇ ಅದನ್ನು ಅಧ್ಯಯನ ಮಾಡುತ್ತಾ ಹೋದರೆ ಅತ್ಯಂತ ಸುಲಭದ ವಿಷಯವಾಗಿದೆ. ನಿತ್ಯಜೀವನದಲ್ಲಿ ವಿಜ್ಞಾನವನ್ನು ನಾವು ಹೆಚ್ಚಾಗಿ ಬಳಕೆ ಮಾಡುತ್ತಿರುತ್ತೇವೆ. ಅದನ್ನು ಅರಿತುಕೊಂಡರೇ ವಿಜ್ಞಾನದಲ್ಲಿ ಸುಲಭವಾಗಿ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಮಾತನಾಡಿ, ಈ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನದಲ್ಲಿ 58 ಮಾದರಿಗಳನ್ನು ತಯಾರಿಸಿ, ತುಂಬಾ ಜಾಣ್ಮೆಯಿಂದ ವಿವರಣೆಯನ್ನು ನೀಡುತ್ತಿದ್ದರು. ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಸಾಕಷ್ಟು ಆಸಕ್ತಿಯನ್ನು ವಹಿಸಿದ್ದಾರೆ ಎಂಬುದು ಇದರಿಂದ ಅರ್ಥವಾಯಿತು ಎಂದರು.

ಸಂಪನ್ಮೂಲ ವ್ಯಕ್ತಿ ಎಸ್.ಎಂ.ನಂಜುಂಡಸ್ವಾಮಿ ಮಾತನಾಡಿ, ವಿಕಸಿತ ಭಾರತಕ್ಕೆ ಪ್ರಸ್ತುತ ವಿಜ್ಞಾನವು ಎಲ್ಲಾ ರಂಗದಲ್ಲಿಯೂ ಹಾಸುಹೊಕ್ಕಾಗಿ ಬೆಳೆದಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಯುವ ನಾಯಕರನ್ನು ಬೆಳೆಸಲು ಗುಣಮಟ್ಟದ ಶಿಕ್ಷಣ ಮತ್ತು ವಿಜ್ಞಾನ ಮನೋಭಾವದಿಂದ ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಜ್ಞಾನ ಮಾದರಿ ತಯಾರಿಕೆ, ರಂಗೋಲಿ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಶ್‌ಮೂರ್ತಿ, ಇಸಿಓ ಪರಶಿವಮೂರ್ತಿ, ಸಿದ್ದಲಿಂಗಸ್ವಾಮಿ, ಉಮಾ ಮಹೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷ ಚಿನ್ನಸ್ವಾಮಿ, ಮುಖ್ಯ ಶಿಕ್ಷಕ ಬಿ.ಬಸವಣ್ಣ, ಶಿಕ್ಷಕಿ ಬಿ.ಆರ್.ಕೋಮಲ, ಎಂ.ದಿಪೀಕಾ ಹಾಗೂ ಇತರರು ಹಾಜರಿದ್ದರು.