ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಅಕ್ಷರಶಃ ‘ನಾಡ ಕುಸ್ತಿ’ ಪರಂಪರೆ ವಿಜೃಂಭಿಸಿತು. ನಿರೀಕ್ಷೆಗೂ ಮೀರಿ ಸೇರಿದ್ದ ಪ್ರೇಕ್ಷಕರು ನೆಚ್ಚಿನ ಹುರಿಯಾಳುಗಳನ್ನು ಹುರಿದುಂಬಿಸುತ್ತಿದ್ದರು. ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹ ನೀಡುತ್ತಿದ್ದರು!
ನಗರದ ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘದ ವತಿಯಿಂದ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದಲ್ಲಿ ಆಯೋಜಿಸಿದ್ದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯ.
ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುತ್ತಿದ್ದಂತೆ ಕ್ರೀಡಾಂಗಣದ ಮೂಲೆ - ಮೂಲೆಯಲ್ಲೂ ನೆಚ್ಚಿನ ಪೈಲ್ವಾನರಿಗೆ ಜೈಕಾರಗಳು ಮೊಳಗಿದವು. ಬಗೆಬಗೆಯ ಹೂಗಳಿಂದ ಅಲಂಕಾರಗೊಂಡ ಮಟ್ಟಿಯ ಮೇಲೆ ಹುಬ್ಬೇರಿದ ಪೈಲ್ವಾನರು ವಿವಿಧ ಪಟ್ಟು ಪ್ರದರ್ಶಿಸಿ ಮದಗಜಗಳ ರೀತಿ ಸೆಣೆಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕುಸ್ತಿ ಪ್ರೇಮಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇನ್ನು ನೆಚ್ಚಿನ ಜಟ್ಟಿಗಳು ಪರಾಕ್ರಮ ಮೆರೆದು ಎದುರಾಳಿಯನ್ನು ಚಿತ್‌ಮಾಡಿದಾಗ ಶಿಳ್ಳೆ, ಚಪ್ಪಾಳೆಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದರು.
ಮೊದಲಿಗೆ ಕನಕಪುರ ಪೈ.ನವೀನ್ ಮತ್ತು ಚಾಮುಂಡಿವಿಹಾರ ಕ್ರೀಡಾಂಗಣದ ಹರ್ಷವರ್ಧನ್ ನಡುವಿನ ಕುಸ್ತಿಯಲ್ಲಿ ಹಷವರ್ಧನ್ ಜಯ ಸಾಧಿಸಿದರು. ಪಾಲಹಳ್ಳಿ ಪೈ.ಜೀವನ್,ಪಾಂಡವಪುರ ಪೈ. ಸುಜೇಂದ್ರ 10 ನಿಮಿಷದ ಕಾಳಗದಲ್ಲಿ ಸಮಬಲಗೊಂಡಿತು. ಮಹಿಳಾ ಕುಸ್ತಿ ಪಟುಗಳಾದ ಬನ್ನೂರಿನ ಪೈ.ಪ್ರೇಕ್ಷಿತ, ಮಂಡ್ಯ ಪೈ ಚೇತನ ನಡುವಿನ ಕಾಳಗದಲ್ಲಿ ಪೈ.ಚೇತನ ಗೆದ್ದರು. ಒಟ್ಟು 40 ಜೊತೆ ನಾಡ ಕುಸ್ತಿ ನಡೆಯಿತು.
ಇದಕ್ಕೂ ಮುನ್ನ ಶಾಸಕ ಕೆ.ಹರೀಶ್ ಗೌಡ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಮೈಸೂರಿಗೂ ಕುಸ್ತಿಗೂ ಅವಿನಾಭಾವ ಸಂಬಂಧವಿದೆ. ಕುಸ್ತಿ ಎಂದರೆ ಕುಸ್ತಿಪಟುಗಳಿಗೆ ಏನೋ ಸಂಭ್ರಮ. ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಆಗಮಿಸುವ ಪೈಲ್ವಾನರಿಗೆ ಅಖಾಡದಲ್ಲಿ ಹಣಾಹಣಿ ನಡೆಸುವುದೇ ಪ್ರತಿಷ್ಠೆಯ ವಿಚಾರ ಎಂದರು.
ಕ್ರೀಡಾ ವರದಿಗಾರ ಗಿರೀಶ ದೊಡ್ಡಮನಿ ಬರೆದಿರುವ ‘ಗರಡಿ ಗಮ್ಮತ್ತು’ ಪುಸ್ತಕವನ್ನು ಇದೇ ವೇಳೆ ಹಿರಿಯ ಪತ್ರಕರ್ತ ರವೀಂದ್ರ ಭಟ್ ಬಿಡುಗಡೆ ಮಾಡಿದರು.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ಎಸ್.ಚಂದ್ರಶೇಖರ್, ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘದ ಅಧ್ಯಕ್ಷ ಪಿ.ನಾಗೇಂದ್ರ, ಕಾರ್ಯಾಧ್ಯಕ್ಷ ಸಿ.ಬಸವರಾಜ್, ಹಿರಿಯ ವಕೀಲ ಓ.ಶಾಮ್ ಭಟ್ಟ, ಸಮಾಜ ಸೇವಕ ಜಿ.ಎನ್. ಅನಂತವರ್ಧನ್,ಪೈ ಎಂ.ಪ್ರವೀಣ್ ಕುಮಾರ್, ಪೈ ಎಂ.ಸುಪುತ್ರ ಇತರರಿದ್ದರು.