ಗುಂಡ್ಲುಪೇಟೆ: ತಾಲೂಕಿನ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಸೋಮವಾರ ಸಂಕ್ರಾಂತಿ ಪ್ರಯುಕ್ತ ವಿಜೃಂಭಣೆಯಿಂದ ದಿವ್ಯರಥೋತ್ಸವ ನಡೆಯಿತು.
ಚಿಕ್ಕತಿರುಪತಿ ಎಂದೇ ಹೆಸರಾದ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ರಥೋತ್ಸವ ನಡೆಯಿತು. ಬಿದಿರಿನಿಂದ ನಿರ್ಮಿಸಿದ ರಥವನ್ನು ಬಣ್ಣಬಣ್ಣದ ಬಟ್ಟೆ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಸಲಾಯಿತು. ಉತ್ಸವ ಮೂರ್ತಿಗಳನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ನಂತರ ರಥದಲ್ಲಿ ಕುಳ್ಳಿರಿಸಿದ ಮಧ್ಯಾಹ್ನ 12 ಗಂಟೆಗೆ ಮುಜರಾಯಿ ಅಧಿಕಾರಿ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಗೋವಿಂದಾ, ಗೋಪಾಲ ಎಂಬ ಜಯಘೋಷ ಭಕ್ತರಿಂದ ಮೊಳಗಿದವು. ನವ ದಂಪತಿಗಳು ಹೂ-ಹಣ್ಣುಗಳನ್ನು ರಥಕ್ಕೆ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಜಾತ್ರಾ ಮಹೋತ್ಸವಕ್ಕೆ ಸ್ಥಳೀಯರಲ್ಲದೆ ನೆರೆ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಪೊಲೀಸರು ಸಂಚಾರಕ್ಕೆ ಕೆಲ ಮಾರ್ಪಾಡು ಮಾಡಿದ್ದರು.
ಗುಂಡ್ಲುಪೇಟೆ ತಾಲೂಕಿನ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ದಿವ್ಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.