ನ್ಯೂಸ್

ವಿಜೃಂಭಣೆಯ ಶನೈಶ್ವರ ಸ್ವಾಮಿ ಉತ್ಸವ

ತಿ.ನರಸೀಪುರ: ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ಶ್ರೀ ಶನೈಶ್ವರ ಸ್ವಾಮಿ ಸೇವಾ ಸಮಿತಿಯಿಂದ 22ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಶ್ರೀ ಶನೈಶ್ವರ ಸ್ವಾಮಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ವಾಟಾಳು ಮಠದ ಡಾ.ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಶನೇಶ್ವರ ಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಶನಿದೇವರ ಕೃಪೆ ನಿರಂತರವಾಗಿ ಇದ್ದಲ್ಲಿ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ. ಶನಿದೇವರ ಒಳ್ಳೆಯ ದೃಷ್ಟಿ ಜನರ ಮೇಲೆ ಬೀಳಲಿ ಎಂದರು.

ಶನೇಶ್ವರ ಸ್ವಾಮಿ ಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ವೀರಭದ್ರ ಕುಣಿತ, ಡೋಲು, ಕಂಸಾಳೆ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಂಡಿದ್ದವು. ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಸೇವಾ ಸಮಿತಿಯ ನಾಗೇಶ್, ಸುಭಾಷ್ ಚೌಧರಿ, ಚಂದು, ಸಾಲೂರು ಸ್ವಾಮಿ, ನಾಗರಾಜು, ಕೃಷ್ಣಪ್ಪ, ನಾಗರಾಜು, ಶ್ರೀಕಂಠ, ಹೆಳವರಹುಂಡಿ ಸಿದ್ದಪ್ಪ ಮತ್ತಿತರರಿದ್ದರು.