ಕಳಸ ಕಲಶೇಶ್ವರ ದೇವರ ಗಿರಿಜಾ ಕಲ್ಯಾಣೋತ್ಸವದಲ್ಲಿ ಗಿರಿಜೆಯ ದಿಬ್ಬಣ ಕಲಶೇಶ್ವರ ದೇವಸ್ಥಾನಕ್ಕೆ ಬರುತ್ತಿರುವುದು. 
ನ್ಯೂಸ್

ವಿಜೃಂಭಣೆಯ ಗಿರಿಜಾ ಕಲ್ಯಾಣೋತ್ಸವ

ಕಳಸ: ಕಲಶೇಶ್ವರಸ್ವಾಮಿಗೆ ಮಂಗಳವಾರ ರಾತ್ರಿ ಗಿರಿಜಾ ಕಲ್ಯಾಣೋತ್ಸವ ನಡೆಯಿತು.

ಇಡೀ ಊರನ್ನೆ ಶೃಂಗಾರ ಮಾಡಲಾಗಿತ್ತು. ದೇವಸ್ಥಾನಕ್ಕೆ ತಳಿರು ತೋರಣ, ಹೂವಿನ ಅಲಂಕಾರ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳನ್ನು ಮುಗಿಸಿ ಮಂಗಳವಾರ ರಾತ್ರಿ ಮೂರು ಗಂಟೆಗೆ ಈಶ್ವರನಿಗೆ ಗಿರಿಜೆಯೊಂದಿಗೆ ಕಲ್ಯಾಣಮಹೋತ್ಸವ ನಡೆಯಿತು.

ಮಂಗಳವಾರ ಸಂಜೆ ಉಪಾಧಿವಂತರು ವಾದ್ಯಘೋಷಗಳೊಂದಿಗೆ ಅಕ್ಷತೆ ಕೊಟ್ಟು ಕಲ್ಯಾಣಕ್ಕಾಗಿ ಊರ ಜನರನ್ನು ಕರೆಯಲಾಯಿತು. ರಾತ್ರಿ ಈಶ್ವರನ ಎದುರು ಉಂಗುರ ಉಡುಗೆಗಳನ್ನು ಇಟ್ಟು ಪೂಜಿಸಿ ಪಲ್ಲಕ್ಕಿಯಲ್ಲಿಟ್ಟು ಗಿರಿಜಾಂಬೆಯ ಬಳಿ ತರಲಾಯಿತು. ನಂತರ ಕಲಶೇಶ್ವರ ದೇವಸ್ಥಾನದಿಂದ ಗಿರಿಜಾಂಬ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಗಿರಿಜಾಂಬೆ ವಿಗ್ರಹವನ್ನು ಹಿಡಿದುಕೊಂಡು ಹೂ ಹಿಂಗಾರದೊಂದಿಗೆ ದೀವಟಿಕೆ, ಪಂಚಪತಾಕಿ, ಕಟ್ಟಿಗೆ, ಚೌರಿ, ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ಗಿರಿಜಾಂಬೆಯ ದಿಬ್ಬಣವು ಗಿರಿಜಾಂಬ ದೇವಸ್ಥಾನದಿಂದ ಕಳಸದ ರಾಜಬೀದಿಯ ಮುಖಾಂತರ ಕಲಶೇಶ್ವರ ದೇವಸ್ಥಾನಕ್ಕೆ ಬಂತು.

ಈ ಸಂದರ್ಭದಲ್ಲಿ ರಾಜಬೀದಿಯ ಇಕ್ಕೆಲಗಳಲ್ಲಿ ಇರುವ ಮನೆಗಳಿಂದ ಭಕ್ತರು ಹಣ್ಣು ಕಾಯಿ ಸಮರ್ಪಿಸಿದರು. ಗಿರಿಜಾಂಬೆಯ ದಿಬ್ಬಣವು ಸರ್ವಾಂಗ ಸುಂದರಿ ಅಮ್ಮನವರ ಬಳಿ ಬಂದಾಗ ಈಶ್ವರನ ಕಡೆಯವರು ದಿಬ್ಬಣವನ್ನು ಎದುರುಗೊಳ್ಳಲಾಯಿತು. ಗಿರಿಜಾಂಬೆ ವಿವಾಹ ಮಂಟಪಕ್ಕೆ ಬಂದ ಕೂಡಲೆ ತಂತ್ರಿಗಳಿಂದ ನಾಂದಿ, ಪುಣ್ಯಾಹಗಳು ನಡೆಯಿತು. ಮಧುಪರ್ಕ ಪೂಜೆ, ದ್ಯಾನವಾಹನ ಪೂಜೆ ನಡೆದು ಕನ್ಯಾವರಣ ಮಾಡಿ, ನಂತರ ಮಂಗಳಾಷ್ಟಕವಾಯಿತು.

ಈ ಸಮಯದಲ್ಲಿ ಎಡನಾಡಿಯ ಬಾಗಿಲಿಗೆ ತೆರೆಹಿಡಿಯಲಾಯಿತು. ಆಗ ಗಿರಿಜಾಂಬ ದೇವಿಯ ವಿಗ್ರಹವನ್ನು ತೆಗೆದುಕೊಂಡು ಕಲಶೇಶ್ವರನ ಬಲಭಾಗದಲ್ಲಿ ಇಟ್ಟು ನಂತರ ಧಾರೆ ಎರೆಯುವ ಕಾರ್ಯಕ್ರಮ ನಡೆದು ಕಂಕಣ ಸಮರ್ಪಣೆಯಾಗಿ ಮಂಗಲ ನೀರಾಜನ, ಸಭಾಪೂಜೆ, ತಾಂಬೂಲ ಪ್ರದಾನ ನಡೆದು ನಂತರ ಭೂತ ಬಲಿ ಮಹೋತ್ಸವ ನಡೆಯಿತು. ನಂತರ ವಧು-ವರ ದಂಪತಿ ದರ್ಶನ ನಡೆದು ಬುಧವಾರ ಮಧ್ಯಾಹ್ನ ಮದುವೆಯ ಊಟವು ವಿಜೃಂಭಣೆೆಯಿಂದ ನಡೆದು ರಾತ್ರಿ ಚಿಕ್ಕ ರಥೋತ್ಸವ ನಡೆಯಿತು. ತಾಲೂಕು ಖಜಾನೆಯಲ್ಲಿರುವ ದೇವರ ಆಭರಣಗಳನ್ನು ತರಿಸಿ ದೇವರಿಗೆ ತೊಡಿಸಿ ಶಾಸಬದ್ಧವಾಗಿ ಕಲಶೇಶ್ವರನಿಗೆ ಕಲ್ಯಾಣವಾಯಿತು. ಸಾವಿರಾರು ಭಕ್ತರು ಆಗಮಿಸಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಕಣ್ತುಂಬಿಸಿಕೊಂಡರು.