| ಕೀರ್ತಿನಾರಾಯಣ ಸಿ. ಬೆಂಗಳೂರು
ಕೊಡಗು ಪ್ರವಾಸ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದ ರಾಜಕೀಯ ಕೋಲಾಹಲದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆ, ಗಣ್ಯ ವ್ಯಕ್ತಿಗಳ ಪ್ರವಾಸದ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾವುದೇ ರೀತಿಯ ಅಚಾತುರ್ಯ ಕೃತ್ಯಗಳಿಗೆ ಆಸ್ಪದವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ಗೆ ಆದೇಶಿಸಿದ್ದು, ಆಯಾ ವಿಭಾಗದ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಎಸ್ಪಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.
ಮೊಟ್ಟೆ ಎಸೆತ ಪ್ರಕರಣದಿಂದ ಕೊಡಗು ಭಾಗದಲ್ಲಿ ಅಶಾಂತಿ ವಾತಾವರಣ ನಿರ್ವಣವಾಗಿತ್ತು. ಜತೆಗೆ ಸಿದ್ದರಾಮಯ್ಯ ಬೆಂಬಲಿಗರು ಆ.26ಕ್ಕೆ ‘ಮಡಿಕೇರಿ ಚಲೋ’ ಬೃಹತ್ ಪಾದಯಾತ್ರೆಗೆ ಮುಂದಾಗಿದ್ದರು. ಮೊಟ್ಟೆ ಎಸೆತ ಪ್ರಕರಣದಲ್ಲಿ ಪೊಲೀಸ್ ವೈಫಲ್ಯದ ಬಗ್ಗೆಯೂ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಾಗೂ ಚುನಾವಣಾ ವರ್ಷವಾಗಿರುವ ಕಾರಣಕ್ಕೆ ಯಾವುದೇ ಅನಾಹುತ ನಡೆಯದಂತೆ ಕಟ್ಟುನಿಟ್ಟಿನ ನಿಯಮಗಳ ಪಾಲನೆಗೆ ಪೊಲೀಸ್ ಇಲಾಖೆ ಆದೇಶಿಸಿದೆ.
ಗಣ್ಯವ್ಯಕ್ತಿಗಳ ಪ್ರವಾಸ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ಮಾಡುವುದು, ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವುದು ಸೇರಿ ಇನ್ನಿತರ ಕಾನೂನು ಉಲ್ಲಂಘಿಸುವ ವ್ಯಕ್ತಿಗಳನ್ನು ಸ್ಥಳದಲ್ಲೇ ದಸ್ತಗಿರಿ ಮಾಡಿ, ನಿಯಮಾನುಸಾರ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಸ್ಥಳೀಯ ಪೊಲೀಸರಿಗೆ ನೀಡಲಾಗಿದೆ. ಒಟ್ಟಾರೆ ಪಾಲಿಸಬೇಕಾದ ಐದಂಶಗಳ ಮಾರ್ಗಸೂಚಿಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸೋಮವಾರ (ಆ.22) ಹೊರಡಿಸಿದ್ದಾರೆ.
ಸೆಕ್ಯುರಿಟಿ ಹೇಗಿರುತ್ತೆ?: ರಾಜ್ಯದಲ್ಲಿ ಸಿಎಂ ಹಾಗೂ ರಾಜ್ಯಪಾಲರಿಗೆ ಮಾತ್ರ ಜ್ಹೆಡ್ ಶ್ರೇಣಿ ಭದ್ರತೆ ಒದಗಿಸಲು ಅವಕಾಶವಿದೆ. ಸಚಿವರು, ಶಾಸಕರು, ಸ್ಪೀಕರ್ ಅಥವಾ ಇನ್ನಾವುದೇ ಪ್ರಭಾವಿ ವ್ಯಕ್ತಿಗಳಿಗೆ ಜೀವ ಬೆದರಿಕೆ ಇರುವ ಮಾಹಿತಿ ಖಚಿತವಾದರೆ ಅಂಥವರಿಗೆ ಜ್ಹೆಡ್ ಶ್ರೇಣಿ ಸೆಕ್ಯುರಿಟಿ ಒದಗಿಸುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಇದೆ.
ಡಿಜಿಪಿ ಜತೆ ರ್ಚಚಿಸಿದ್ದ ಸಿಎಂ: ಸಿದ್ದರಾಮಯ್ಯ ಕೊಡಗು ಭೇಟಿ ಸಂದರ್ಭದಲ್ಲಿ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಲ್ಲದೆ, ಕಾರಿನೊಳಗೆ ಕರಪತ್ರ ಹಾಕಲಾಗಿತ್ತು. ಅಲ್ಲದೆ, ಗೋಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದರು. ಸ್ಥಳದಲ್ಲಿ ಪೊಲೀಸರಿದ್ದರು ತಡೆಯಲಿಲ್ಲ ಎಂಬ ಆರೋಪವನ್ನು ಸಿದ್ದರಾಮಯ್ಯ ಅವರೇ ಮಾಡಿದ್ದರು. ಈ ಸಂಬಂಧ ಡಿಜಿಪಿ ಪ್ರವೀಣ್ ಸೂದ್ ಅವರನ್ನು ಕರೆಸಿಕೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಘಟನೆ ಬಗ್ಗೆ ಮಾಹಿತಿ ಪಡೆದು ರ್ಚಚಿಸಿದ್ದರು. ಗಣ್ಯರ ಪ್ರವಾಸದ ವೇಳೆ ಬಿಗಿ ಪೊಲೀಸ್ ಭದ್ರತೆ ಒದಗಿಸು ವಂತೆಯೂ ಸೂಚಿಸಿದ್ದರು ಎಂದು ಗೊತ್ತಾಗಿದೆ.
ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಗಣ್ಯ ವ್ಯಕ್ತಿಗಳ ಪ್ರವಾಸ ಹಾಗೂ ಇನ್ನಿತರ ಕಾರ್ಯಕ್ರಮಗಳ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ. ಆಡಳಿತ ಪಕ್ಷ ಅಥವಾ ಪ್ರತಿಪಕ್ಷಗಳ ಯಾವುದೇ ಮುಖಂಡರಾದರೂ ನಿಯಮದ ಪ್ರಕಾರ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತದೆ. | ಅಲೋಕ್ ಕುಮಾರ್ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ)