ಎಚ್.ಡಿ.ಕೋಟೆ: ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಭವನ ಪೂರ್ಣ ಮಾಡಲು ಎರಡು ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ನಾಯಕ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಕೋಟೆ ವಿಧಾನಸಭಾ ಕ್ಷೇತ್ರಕ್ಕೆ 443 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಡಿಮೆ. ಆದರೆ ಸರ್ಕಾರದ ಮಟ್ಟದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಸಮಾಜ ಸೇವೆ ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ವಾಲ್ಮೀಕಿ ಮಹರ್ಷಿ ಪ್ರಶಸ್ತಿ ನೀಡುವ ಮೂಲಕ ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ವಾಲ್ಮೀಕಿ ಮಹರ್ಷಿ ರಾಮಾಯಣದಂತ ಮಹಾನ್ ಗ್ರಂಥವನ್ನು ರಚಿಸಿದರು. 24,000 ಶ್ಲೋಕಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಶೂದ್ರ ಸಮುದಾಯದ ಜನರು ವಿದ್ಯೆ ಕಲಿಯದ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿ ಸಂಸ್ಕೃತ ಕಲಿತು ರಾಯಾಯಣ ಬರೆದರು. ಇದು ಸಣ್ಣ ಕೆಲಸವಲ್ಲ. ರಾಮಾಯಣ, ಮಹಾಭಾರತವನ್ನು ಬರೆದ ತಳ ಸಮುದಾಯದ ವ್ಯಕ್ತಿಗಳು ವಿದ್ಯೆ ಯಾರ ಸ್ವತ್ತಲ್ಲ ಎಂಬುದನ್ನು ತೋರಿಸಿದರು. ಆ ಮೂಲಕ ಎಲ್ಲರೂ ಕಲಿಯಲು ಅವಕಾಶ ಇದೆ ಎಂಬುದನ್ನು ಸಾಬೀತುಪಡಿಸಿದರು ಎಂದು ಹೇಳಿದರು.
ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ವಿದ್ಯೆ ಕಲಿಯದಿದ್ದರೆ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಕಲಿಯಬೇಕು. ವಿದ್ಯಾವಂತರಾಗಲು ಜಾತಿ ಅಡ್ಡ ಬರುವುದಿಲ್ಲ. ಮೇಲ್ವರ್ಗದವರು ಮಾತ್ರ ವಿದ್ಯೆ ಕಲಿಯಬೇಕು. ಕೆಳ ಜಾತಿಯವರು ವಿದ್ಯೆ ಕಲಿಯುವಂತಿಲ್ಲ ಎಂಬ ಮಾತು ಸುಳ್ಳು. ಪಾಲಕರು ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು ಎಂದರು.
ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಕ್ಕೆ ಹಣವಿಲ್ಲ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಹೀಗಿದ್ದರೂ 400 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಷ್ಟಾದರೂ ಬಿಜೆಪಿ ಸುಳ್ಳು ವದಂತಿ ಹಬ್ಬಿಸುತ್ತಿದೆ ಎಂದು ಕಿಡಿಕಾರಿದರು.
ಸಂಸದ ಸುನೀಲ್ ಬೋಸ್ ಮಾತನಾಡಿ, ಅನಿಲ್ಕುಮಾರ್ ಅವರು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ತಾಲೂಕಿನ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದು, ಆ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ ಎಂದರು.
ವಾಲ್ಮೀಕಿ ಮಹರ್ಷಿ ಅವರ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಿರೋಧ ಪಕ್ಷಗಳು ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಆರೋಪ ಮಾಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿವೆ. ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಆಡಳಿತ ನಡೆಸದೆ ತೊಂದರೆ ಕೊಡುತ್ತಿದ್ದಾರೆ. ಅತ್ತ ಬಿಜೆಪಿ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲು ಮೂಲ ಕಾರಣ ವಾಲ್ಮೀಕಿ ಮಹರ್ಷಿ. ರಾಜಕೀಯಕ್ಕಾಗಿ ಬಿಜೆಪಿ ಜೈ ಶ್ರೀರಾವ ಎಂದು ಕರೆಯುತ್ತಿದೆ. ಮಾತು ಕೊಟ್ಟರೆ ಉಳಿಸಿಕೊಳ್ಳುವ ಸಮುದಾಯ ನಮ್ಮದು. ವಿಧಾನಸೌಧದ ಮುಂದೆ ವಾಲ್ಮೀಕಿ ಮಹರ್ಷಿ ಪ್ರತಿಮೆ ನಿರ್ಮಾಣ ಆಗಲು ಸಿದ್ದರಾಮಯ್ಯ ಕಾರಣ. 2014ನೇ ಸಾಲಿನಲ್ಲಿ ಪರಿವಾರ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಲು ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಎರಡು ಕೋಟಿ ರೂ. ಅನುದಾನ ಅಗತ್ಯವಿದೆ. ಮೈಸೂರು-ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಸಹಕಾರ ಅಗತ್ಯವಿದ್ದು, ಸಿದ್ದರಾಮಯ್ಯ ಅವರ ಋಣ ತೀರಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹನುಮನ ರೀತಿ ಇದ್ದು ಸೇವೆ ಮಾಡಲಾಗುವುದು ಎಂದರು.
ಪಂಚ ಗ್ಯಾರಂಟಿ ಪಿತಾಮಹ: ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ, ಪಂಚ ಗ್ಯಾರಂಟಿ ಯೋಜನೆಯ ಪಿತಾಮಹ ಸಿದ್ದರಾಮಯ್ಯ. ಒಂದೆಡೆ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಆರ್ಥಿಕ ಮೀಸಲಾತಿ, ಮತ್ತೊಂದೆಡೆ ಅಂಬೇಡ್ಕರ್ ಅವರ ಯೋಜನೆಗಳನ್ನು ನಾಡಿನ ಜನರಿಗೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ಸಲ್ಲುತ್ತದೆ ಎಂದರು.
ವಸ್ತುಪ್ರದರ್ಶನ: ತಾಲೂಕಿನ ವಿವಿಧ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ವಸ್ತುಪ್ರದರ್ಶನ ಏರ್ಪಡಿಸಿ, ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.ಇದಕ್ಕೂ ಮುನ್ನ ಪಟ್ಟಣದ ಮೇಟಿಕುಪ್ಪೆ ರಸ್ತೆಯಲ್ಲಿರುವ ವಾಲ್ಮೀಕಿ ಮಹರ್ಷಿ ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ರಾಜನಹಳ್ಳಿ ಶ್ರೀ ವಾಲ್ಮೀಕಿ ಪೀಠದ ಪ್ರಸಾನಂದಪುರಿ ಸ್ವಾಮೀಜಿ ಪುಷ್ಪಾರ್ಚನೆ ಮಾಡಿದರು. ನಂತರ ವಿವಿಧ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು.
ಎರಡೂ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸ್ತಬ್ಧಚಿತ್ರ, ಡೊಳ್ಳುಕುಣಿತ, ನಗಾರಿ, ಕೀಲುಗೊಂಬೆ, ಸತ್ತಿಗೆ ಸೂರಿಪಾನಿ, ನಾದ ಸ್ವರ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಬೆಳ್ಳಿ ರಥದಲ್ಲಿ ವಾಲ್ಮೀಕಿ ಮಹರ್ಷಿ ಭಾವಚಿತ್ರವನ್ನು ಇಟ್ಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ಬಳಿಕ ಅಂತಿಮವಾಗಿ ವೇದಿಕೆ ಕಾರ್ಯಕ್ರಮದ ಬಳಿ ಅಂತ್ಯವಾಯಿತು.
ಶಾಸಕರಾದ ಡಾ.ಡಿ.ತಿಮ್ಮಯ್ಯ, ದರ್ಶನ್ ಧ್ರುವನಾರಾಯಣ, ಡಿ.ರವಿಶಂಕರ್, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ರಾಜನಾಯಕ, ಕ್ಯಾತನಹಳ್ಳಿ ನಾಗರಾಜು, ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ ಇತರರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಿ.ಅನಿಲ್ಕುಮಾರ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಗರಂ ಆದ ಸಿಎಂ ಏಯ್ ಅನಿಲ್ಗೆ ಸಚಿವ ಸ್ಥಾನ ಕೊಡುವುದಕ್ಕೆ ಸಾಧ್ಯವಿಲ್ಲ. ಆಶ್ವಾಸನೆ ಕೊಟ್ಟು ಮಾತಿಗೆ ತಪ್ಪಲಾರೆ. ಮಾಜಿ ಮಂತ್ರಿ ನಾಗೇಂದ್ರನಿಗೆ ಸಚಿವ ಸ್ಥಾನ ಕೊಡಬೇಕು. ಚುನಾವಣೆ ಮುಗಿದ ನಂತರ ಅಧಿಕಾರ ನೀಡಲಾಗುವುದು ಎಂದರು.