ನ್ಯೂಸ್

ವಾಲ್ಮೀಕಿ ನಿಗಮ ಹಗರಣದ ಪ್ರಕರಣದಲ್ಲಿ ಒತ್ತಡ ಆರೋಪ : ಅಧಿಕಾರಿಗಳ ಎಫ್ಐಆರ್ ಗೆ ವಿರುದ್ಧ ತಡೆ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ತನಿಖೆ ವೇಳೆ ಮಾಜಿ ಸಚಿವ ನಾಗೇಂದ್ರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಹೇಳುವಂತೆ ಅಧಿಕಾರಿಗೆ ಒತ್ತಡ ಹೇರಿದ ಆರೋಪದ ಮೇಲೆ ಇಡಿ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎ್ಐಆರ್ ಪ್ರಶ್ನಿಸಿ ಇಡಿ ಅಧಿಕಾರಿಗಳಾದ ಐಆರ್‌ಎಸ್ ಮಿತ್ತಲ್ ಮತ್ತು ಮುರಳಿ ಕಣ್ಣನ್ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ತಡೆಯಾಜ್ಞೆ ನೀಡಿದೆ.

ವಿಚಾರಣೆ ವೇಳೆ ಜಾರಿ ನಿರ್ದೇನಾಲಯದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಇಡಿ ಅಧಿಕಾರಿಗಳು ಕಚೇರಿ ಮೇಲೆ ಜೂ.18 ಮತ್ತು 19ರಂದು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಹಲವು ಮಂದಿಯ ವಿರುದ್ಧ ಆರೋಪ ಸಾಬೀತುಪಡಿಸಬಹುದಾದಂತಹ ಸಾಕ್ಷ್ಯಧಾರಗಳು ಲಭ್ಯವಾಗಿದ್ದವು.

ಈ ಆಧಾರದಲ್ಲಿ ನಿಗಮದ ಹೆಚ್ಚುವರಿ ನಿರ್ದೇಶಕರಾದ ಕಲ್ಲೇಶ್ ಎಂಬುವರನ್ನು ಜು.16ರಂದು ವಿಚಾರಣೆಗೆ ಕರೆದಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವು ಮಾಹಿತಿ ಪಡೆದು ಕಳುಹಿಸಿದ್ದರು. ಈ ವೇಳೆ ವಿಚಾರಣೆ ವೇಳೆ 17 ಪ್ರಶ್ನೆಗಳನ್ನು ಕೇಳಿದ್ದು, ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತ ಬೇಕಾಗಿದೆ. ಕೆಳ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು ಎಂದು ಕೋರಿದ್ದರು. ಇದಾದ ಆರು ದಿನಗಳ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕಲ್ಲೇಶ್ ಅವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಇಡಿ ಕಚೇರಿ ಮತ್ತು ಪೊಲೀಸ್ ಠಾಣೆಗೆ ಸಮೀಪವಿದ್ದರು, ಆರು ದಿನಗಳ ಬಳಿಕ ದೂರು ದಾಖಲಿಸಿದ್ದಾರೆ. ಈ ಘಟನೆ ಮೂಲಕ ಇಡಿ ಅಧಿಕಾರಿಗಳ ಅವರ ನಿಯಮಗಳ ಪ್ರಕಾರ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರ ಬೆದರಿಕೆ ಹಾಕಲಾಗುತ್ತಿದೆ. ಇಡಿ ಬಳಿ ದೋಷಾರೋಪ ನಿರೂಪಿಸಲು ಅಗತ್ಯವಿರುವ ದಾಖಲೆಗಳಿದ್ದರೂ ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರನ್ನು ಸಿಲುಕಿಸುವ ಕೆಲಸ ನಡೆಯುತ್ತಿದೆ. ಇವೆಲ್ಲವನ್ನೂ ಗಮನಿಸಿದರೆ ಇದೊಂದು ದುರುದ್ದೇಶದಿಂದ ಕೂಡಿದೆ ಎನ್ನುವುದು ತಿಳಿದುಬರುತ್ತದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅರ್ಜಿಯಲ್ಲೇನಿದೆ?

ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ತನಿಖೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಯಾವುದೇ ಪ್ರಾಥಮಿಕ ವಿಚಾರಣೆಯಿಲ್ಲದೆ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಇದಕ್ಕೆ ತಡೆ ನೀಡಬೇಕೆಂದು ಮನವಿ ಮಾಡಿದರು.

ಸಿಎಂ, ನಾಗೇಂದ್ರ ಹೆಸರೇಳಲು ಒತ್ತಡ
ಎಂ.ಜಿ.ರೋಡ್ ಬ್ಯಾಂಕ್ ಖಾತೆಗೆ ಅನುದಾನ ಜಮಾ ಮಾಡಲು ಮಾಜಿ ಸಚಿವ ನಾಗೇಂದ್ರ, ಸಿಎಂ ಸಿದ್ದರಾಮಯ್ಯ ಅವರಿಂದ ನಿರ್ದೇಶನವಿತ್ತು. ಈ ಹಿನ್ನೆಲೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ತಮ್ಮ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಹಾಗೂ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ,ಒತ್ತಡ ಹೇರಿದ್ದಾರೆಂದು ಆರೋಪಿಸಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕಲ್ಲೇಶ್.ಬಿ ಸೋಮವಾರವಷ್ಟೇ (ಜು.22ರಂದು) ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಇಡಿ ಅಧಿಕಾರಿಗಳಾದ ಕಣ್ಣನ್ ಹಾಗೂ ಮಿತ್ತಲ್ ವಿರುದ್ಧ ದೂರು ದಾಖಲಿಸಿದ್ದರು. ಈ ಎ್ಐಆರ್ ರದ್ದುಪಡಿಸುವಂತೆ ಕೋರಿ ಈ ಅಧಿಕಾರಿಗಳು ಮಂಗಳವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ತನಿಖೆಗೆ ಸಿಬಿಐಗೆ ವಹಿಸಲು ಅರ್ಜಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ತುರ್ತು ನೋಟಿಸ್ ಜಾರಿಗೊಳಿಸಿದೆ. ಬ್ಯಾಂಕ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಬ್ಯಾಂಕಿಂಗ್ ನಿಯಂತ್ರಣಾ ಕಾಯ್ದೆಯ ಸೆಕ್ಷನ್ 35(ಎ) ಪ್ರಕಾರ ರಿಸರ್ವ್ ಬ್ಯಾಂಕ್ ಆ್ ಇಂಡಿಯಾ, ಬ್ಯಾಂಕ್ ಗಳ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ, ಬ್ಯಾಂಕ್‌ಗಳ ತಪ್ಪುಗಳನ್ನು ಪರಿಶೀಲನೆ ನಡೆಸಲಿದೆ. ಪ್ರಕರಣ ಸಂಬಂಧ ಪಾರದರ್ಶಕ ತನಿಖೆ ನಡೆಸಬೇಕಾಗಿದ್ದು, ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಯಿಂದ ನಡೆಸಬೇಕಾಗಿದೆ. ಬ್ಯಾಂಕ್‌ಗಳ ಮೂಲಕ 50 ಕೊಟಿಗೂ ಹೆಚ್ಚು ರೂ.ಗಳ ಅವ್ಯವಹಾರ ನಡೆದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧೀನದ ಸಿಬಿಐ ತನಿಖೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ ಎಂದರು.