ನ್ಯೂಸ್

ವಾಲ್ಮೀಕಿ ತತ್ವಾದರ್ಶ ಬದುಕಿಗೆ ದಾರಿದೀಪ

ಕೋಲಾರ: ಮಾನವನ ದಿನನಿತ್ಯದ ಬದುಕಿಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯ ತತ್ವಾದರ್ಶಗಳು ದಾರಿದೀಪವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಜಿಲ್ಲಾಡಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಗ್ರಂಥಗಳು ಎಷ್ಟು ಮುಖ್ಯವೋ ಅದೇ ರೀತಿ ಹಿಂದುಗಳಿಗೆ ರಾಮಾಯಣ ಧರ್ಮ ಗ್ರಂಥವಾಗಿದೆ ಎಂದರು.

ವಾಲ್ಮೀಕಿ ಅವರು ಮಹಾನ್ ಪುರುಷ, ತತ್ವಜ್ಞಾನಿ ಅಗಣಿತ ಮಹೀಮರಾಗಿದ್ದರು. ಅನೇಕ ಸಂಸ್ಕೃತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಸುಮಾರು 24,000ಕ್ಕೂ ಹೆಚ್ಚಿನ ಶ್ಲೋಕಗಳು ನಮ್ಮನ್ನು ಸನ್ಮಾರ್ಗದಲ್ಲಿ ಸಾಗಲು ಪ್ರೇರೇಪಿಸುವಂತಹದ್ದಾಗಿದೆ. ವಾಲ್ಮೀಕಿ ರಚಿಸಿದ ರಾಮಾಯಣ ಸೂರ್ಯ ಚಂದ್ರರು ಇರುವವರೆಗೂ ಶಾಶ್ವತವಾಗಿರುತ್ತದೆ. ರಾಮಾಯಣದಲ್ಲಿ ಬರುವಂತಹ ಒಂದೊಂದು ಪಾತ್ರಗಳು, ತತ್ವಾದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದರು.

ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ವಾಲ್ಮೀಕಿ ಅವರು ತಮ್ಮ ದೃಢ ತಪಸ್ಸಿನಿಂದ ಅಭೂತಪೂರ್ವ ಗ್ರಂಥವನ್ನು ರಚಿಸಿದ್ದಾರೆ. ಸಮಾಜದಲ್ಲಿ ಹೆಣ್ಣು ಹೇಗಿರಬೇಕು ಯಾವ ಗುಣಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ರಾಮಾಯಣದಲ್ಲಿ ಸೀತೆ ಮೂಲಕವಾಗಿ ತಿಳಿಸಿದ್ದಾರೆ. ರಾಮಾಯಣದಲ್ಲಿ ಬರುವಂತಹ ರೀತಿ ನೀತಿ, ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಾಲ್ಮೀಕಿ ಬಗ್ಗೆ ಡಾ.ಸಾವಿತ್ರಿ ವಿಶೇಷ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿ ರಾಹುಲ್ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 1 ಲಕ್ಷ ರೂ. ಗಳ ಚೆಕ್ ವಿತರಿಸಲಾಯಿತು.

ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ನಗರಸಭೆ ಆಯುಕ್ತ ಶ್ರೀಕಾಂತ್, ಸಮುದಾಯದ ಮುಖಂಡರಾದ ಅಂಬರೀಷ್, ಮಾಲೂರು ವೆಂಕಟರಾಮ್, ನಾಗನಾಳ ಮುನಿಯಪ್ಪ ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.