ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಭವನದ ಜಾಗದ ಒತ್ತುವರಿ ತೆರವು ವಿಚಾರದಲ್ಲಿ ವಾಲ್ಮೀಕಿ ಸಮುದಾಯದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಒಂದು ಗುಂಪು ಸಭೆಯನ್ನು ಭಹಿಷ್ಕರಿಸಿದೆ. ಮತ್ತೊಂದು ಗುಂಪು ಸಭೆಯಲ್ಲಿ ಭಾಗವಹಿಸಿ ಅ.೧೭ ರಂದು ಜಿಲ್ಲಾಡಳಿತದ ವತಿಯಿಂದ ನಡೆಯುವ ಜಯಂತಿಗೆ ಸಹಕಾರ ನೀಡಿತಲ್ಲದೆ ಶಿಷ್ಠಾಚಾರದ ಪ್ರಕಾರ ಯಶಸ್ವಿಯಾಗಿ ಜಯಂತಿ ಆಚರಣೆಗೆ ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿ, ನಾವು ಪೂರ್ವಭಾವಿ ಸಭೆ ಕರೆದಿರುವುದು ವಾಲ್ಮೀಕಿ ಜಯಂತಿಯ ಸಿದ್ದತೆ ಬಗ್ಗೆ ಪೂರ್ವ ಸಭೆಯಾಗಿದೆ. ಇದರಲ್ಲಿ ವಾಲ್ಮೀಕಿ ಜಯಂತಿ ಬಗ್ಗೆ ಮಾತ್ರ ಸಲಹೆಗಳನ್ನು ನೀಡಬಹುದು. ಒತ್ತುವರಿ ತೆರುವು ವಿಚಾರವಾಗಿ ವಾಲ್ಮೀಕಿ ಜಯಂತಿ ಮುಗಿದ ನಂತರ ಇನ್ನೊಂದು ದಿನ ಪ್ರತ್ಯೇಕ ಸಭೆ ಕರೆಯೋಣ ಎಂದರು.
ನಾನು ಜಿಲ್ಲಾಧಿಕಾರಿಯಾಗಿ ಬಂದ ನಂತರ ಇದು ಎರಡನೇ ವಾಲ್ಮೀಕಿ ಜಯಂತಿಯಾಗಿದೆ. ಕಳೆದ ವರ್ಷವು ವಾಲ್ಮೀಕಿ ಭವನದ ಒತ್ತುವರಿ ತೆರವು ಅಗುವವರೆಗೆ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಹಠಕ್ಕೆ ಬಿದ್ದಾಗ ಸಮಾಧಾನ ಪಡೆಸಿ ಉದ್ಘಾಟನೆ ನೆರವೇರಿಸಲಾಯಿತು. ಈಗ ಪ್ರಕರಣ ನ್ಯಾಯಾಲಯದಲ್ಲಿದೆ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸೋಣ. ಅಗತ್ಯವಾದರೆ ಪ್ರತ್ಯೇಕ ವಕೀಲರನ್ನು ನೇಮಿಸೋಣ, ಕಾರ್ಯಕ್ರಮದಲ್ಲಿ ಯಾರಿಗೂ ಧಕ್ಕೆಯಾಗದಂತೆ ಆಚರಿಸೋಣ. ಯಾರಾದರೂ ಕಾರ್ಯಕ್ರಮಗಳಿಗೆ ಅಡ್ಡಿ ಪಡೆಸಿದರೆ ಎಸ್.ಪಿ. ಅವರು ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದರು.
ನಗರಸಭೆ ಸದಸ್ಯ ಅಂಬರೀಷ್, ಬಾಲಗೋವಿಂದ, ವೆಂಕಟರಾಮ್, ದಲಿತ ಮುಖಂಡರಾದ ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಡಾ.ಚಂದ್ರಶೇಖರ್ ಮುಂತಾದವರು ಜಿಲ್ಲಾಡಳಿತ ಪರವಾಗಿ ಬೆಂಬಲಕ್ಕೆ ನಿಂತು ಸಭೆಯು ಮುಂದುವರೆಯಲು ಸಹಕಾರ ನೀಡಿದರು.
ನಗರಸಭಾ ಸದಸ್ಯ ಅಂಬರೀಷ್ ಮಾತನಾಡಿ, ವಾಲ್ಮೀಕಿ ಜಯಂತಿಗೆ ಪ್ರತಿವರ್ಷ ಅಡ್ಡಿ ಪಡಿಸುವುದು ಕೆಲವರಿಗೆ ಅಭ್ಯಾಸವಾಗಿದೆ. ಅದರೆ ನಾವುಗಳು ಜಿಲ್ಲಾಡಳಿತ ಪರವಾಗಿ ಇರುತ್ತೇವೆ. ಪ್ರತಿ ಪಂಚಾಯಿತಿಯಿAದಲೂ ಪಲ್ಲಕ್ಕಿಗಳು ಬರಲು ಸೂಚಿಸಲಾಗಿದೆ ಎಂದರು.
ಮಾಲೂರಿನ ವೆಂಕಟರಾಮ್ ಮಾತನಾಡಿ, ವಾಲ್ಮೀಕಿ ಭವನವನ್ನು ಸರ್ಕಾರವು ೫ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿರುವುದನ್ನು ಸದ್ಬಳಸಿಕೊಳ್ಳದೆ ಸಣ್ಣ ಪುಟ್ಟ ಕಾರಣಗಳಿಗೆ ಮುನಿಸಿಕೊಂಡು ಬಳಸಿಕೊಳ್ಳದೆ ಇರುವುದು ಸಮಂಜಸವಲ್ಲ. ಯಾವ ತಾಲ್ಲೂಕಿನಲ್ಲಿ ಆಚರಿಸುವುದಿಲ್ಲವೋ ಅವರುಗಳು ಜಿಲ್ಲಾ ಕೇಂದ್ರದ ಕಾರ್ಯಕ್ರಮದಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ದಲಿತ ಮುಖಂಡ ವಿಜಯ ಕುಮಾರ್ ಮಾತನಾಡಿ ಯಾವೂದೇ ಕಾರಣಕ್ಕೂ ಸಂಘಟನೆಗಳು ವಿಭಜನೆಯಾಗದಂತೆ ಒಗ್ಗಟ್ಟನ್ನು ಕಾಪಾಡಿ ಕೊಳ್ಳಬೇಕೆಂದು ಸಲಹೆ ನೀಡಿದರು.
ಪಂಡಿತ್ ಮುನಿವೆಂಕಟಪ್ಪ ಮಾತನಾಡಿ ಎಸ್.ಸಿ.ಎಸ್.ಟಿ.ಗಳು ಒಂದಾಗಿ ಜಿಲ್ಲಾಡಳಿತಕ್ಕೆ ಬಲತುಂಬುವ ಕೆಲಸ ಮಾಡಬೇಕು, ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾದಂತೆ ಸಮುದಾಯಕ್ಕೆ ವಂಚನೆಯಾಗಬಾರದು ಎಂದರು.
ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರು ಸಭೆಯಲ್ಲಿ ವಾಲ್ಮೀಕಿ ಜಯಂತಿಯ ಅಜೆಂಡವನ್ನು ಮಂಡಿಸಿ, ಪ್ರತಿವರ್ಷದಂತೆ ಈ ವರ್ಷವು ೧೭ರಂದು ಬೆಳಿಗ್ಗೆ ೯ ಗಂಟೆಗೆ ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಸಮರ್ಪಿಸಿ ವಾಲ್ಮಿಕಿ ಭಾವಚಿತ್ರಗಳನ್ನು ಹೊತ್ತ ಪಲ್ಲಕ್ಕಿಗಳ ಮೆರವಣಿಗಳಿಗೆ ಚಾಲನೆ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳಿAದ ಪಲ್ಲಕ್ಕಿಗಳ ಸಮೇತ ಅಚ್ಚುಕಟ್ಟಾಗಿ ಜಯಂತಿ ಆಚರಣೆ ಸಂಬAಧ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಅಪರ ಜಿಲ್ಲಾಧಿಕಾರಿ ಮಂಗಳಾ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಚಿತ್ರ ೦೯ ಕೆ.ಎಲ್.ಆರ್. ೦೨ : ಜಿಲ್ಲಾಧಿಕಾರಿಗಳ ಸಭಾಂಗಣದಲ್ಲ ನಡೆದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಅಕ್ರಂಪಾಷ, ಎಸ್.ಪಿ.ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಮಂಗಳಾ ಮುಂತಾದವರಿದ್ದರು.