ಕರ್ನಾಟಕ ಮೀನುಗಾರಿಕೆ ಇಲಾಖೆ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೀನುಗಾರಿಕಾ ಮಹಾ ವಿದ್ಯಾಲಯ ಸಹಯೋಗದೊಂದಿಗೆ ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ೫ ದಿನಗಳ ವಾಣಿಜ್ಯ ಸಮುದ್ರ ಆಹಾರ ಮತ್ತು ಮೀನು ಸ್ನ್ಯಾಕ್ಸ್ ತಯಾರಿಕಾ ತರಬೇತಿ ಶಿಬಿರಕ್ಕೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಹೆಚ್.ಮಂಜುನಾಥ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಂದಿನಿ ಹಾಲಿನ ಬೂತ್‌ಗಳಲ್ಲಿ ಹಾಲು ಮತ್ತು ಹಾಪ್‌ಕಾಮ್ಸ್‌ಗಳಲ್ಲಿ ಹಣ್ಣು-ತರಕಾರಿ ದೊರೆಯುವಂತೆ ಮೀನುಗಾರಿಕೆ ಇಲಾಖೆ ವ್ಯಾಪ್ತಿಯ ಮಳಿಗೆಗಳಲ್ಲಿ ತಾಜಾ ಮೀನು ಮಾಂಸ ದೊರೆಯಲಿದ್ದು, ಸಣ್ಣ ಹೋಟೆಲ್ ಮತ್ತು ಫಾಸ್ಟ್ ಪುಡ್‌ಗಳಲ್ಲಿ ಮೀನಿನ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಸಬಲತೆ ಸಾಧಿಸುವ ಜೊತೆಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದರು.
ಮೀನು ಆರೋಗ್ಯಕರ ಮಾಂಸಹಾರವಾಗಿದ್ದು, ಸೇವನೆ ಮಾಡುವುದರಿಂದ ಪ್ರೋಟಿನ್ ಮತ್ತು ಒಮೆಗಾ-೩ ಫ್ಯಾಟ್ ದೊರೆಯುತ್ತದೆ. ಎಣ್ಣೆ ತಯಾರಿಕೆಗೂ ಮೀನು ಬಳಕೆ ಮಾಡುವುದರಿಂದ ಕೃಷಿಯ ಜೊತೆಗೆ ಪರ್ಯಾಯ ಉದ್ಯೋಗವಾಗಿಯೂ ಮೀನುಗಾರಿಕೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಸಹಾಯಕ ನಿರ್ದೇಶಕಿ ಭವಾನಿ ಮಾತನಾಡಿ, ಮಹಿಳೆಯರು ಮೀನಿನಿಂದ ತಯಾರಿಸಬಹುದಾದ ಸ್ನ್ಯಾಕ್‌ಗಳ ತರಬೇತಿ ಪಡೆದು ಸ್ವಾವಲಂಬಿಗಳಾಗಿ ಜೀವನ ನಡೆಸಬಹುದಾಗಿದೆ. ಸಣ್ಣ ಮೀನುಗಳನ್ನು ಬಿಸಾಡದೆ ಒಣಗಿಸಿ ಮಾರಾಟ ಮಾಡಬಹುದು. ಫಿಸ್ ಕಟ್‌ಲೆಟ್ ಸೇರಿದಂತೆ ವಿವಿಧ ರಿಚಿಕರ ಸ್ನ್ಯಾಕ್‌ಗಳನ್ನು ತಯಾರಿಸಿ ಹಣ ಸಂಪಾದನೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕಾ ಮಹಾವಿದ್ಯಾಲಯ ನೀಡುವ ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ನಂತರ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಮಂಜ ನಾಯ್ಕ್ ಮೀನುಗಾರಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮೈಸೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗದ ಜಿಲ್ಲಾಧ್ಯಕ್ಷ ಸಿದ್ದಯ್ಯ ನಾಯಕ್, ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ಕಾರ್ಯದರ್ಶಿ ಎಂ.ದಿವ್ಯಶ್ರೀ ಮತ್ತಿತರರಿದ್ದರು.