ಹಾಸನ: ಹಾಸನಾಂಬೆ ದೇವಿ ಜಾತ್ರಾ ಸಮಯದಲ್ಲಿ ಭಕ್ತಾದಿಗಳು ಸಾಂಪ್ರದಾಯಿಕ ವಸ್ತ್ರ ಸಂಹಿತೆ ಹಾಗೂ ಹಣೆಯಲ್ಲಿ ಕುಂಕುಮ, ಚಂದನ, ವಿಭೂತಿ, ನಾಮ ಹಾಕಿಕೊಂಡು ದರ್ಶನ ಮಾಡಲು ಪ್ರೇರೇಪಿಸುವ ಜನಜಾಗೃತಿ ಅಭಿಯಾನಕ್ಕೆ ಸೋಮವಾರ ಶ್ರೀ ಹಾಸನಾಂಬ ದೇವಾಲಯದ ಮುಂಭಾಗ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಎನ್. ರಮೇಶ್ ಮಾತನಾಡಿ, ಶ್ರೀ ಹಾಸನಾಂಬ ದೇವಿ ಜಾತ್ರಾ ಸಮಯದಲ್ಲಿ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರು ವಸ್ತ್ರ ಸಂಹಿತೆಯನ್ನು ಪಾಲಿಸಿ ಹಾಗೂ ಹಣೆಯಲ್ಲಿ ಕುಂಕುಮ, ಚಂದನ ಅಥವಾ ವಿಭೂತಿ ಇತ್ಯಾದಿಗಳನ್ನು ಧರಿಸಿ ದರ್ಶನಕ್ಕೆ ಆಗಮಿಸುವಂತೆ ವಿನಂತಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಚಿನ್ನ ಬೆಳ್ಳಿ ಕೆಲಸಗಾರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ರಾಜು ಅವರು ಮಾತನಾಡಿ, ಹಿಂದು ಧರ್ಮದ ಆಚಾರ, ವಿಚಾರಗಳನ್ನು ಗೌರವಿಸುವ ಮತ್ತು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರೂ ಕೂಡ ಸ್ವಯಂ ಪ್ರೇರಿತರಾಗಿ ವಸ್ತ್ರ ಸಂಹಿತೆ ಪಾಲಿಸಿ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರುಣ್ ಕುಮಾರ್, ನಾಗೇಶ್, ಮಂಜುನಾಥ್, ಬೀರೇಶ್, ಅಶೋಕ, ಸುಭಾಷಿಣಿ ಉದಯ್ ಕುಮಾರ್, ಪಾಂಡುರಂಗ, ಗೋಪಾಲ್ ಇನ್ನಿತರರು ಭಾಗವಹಿಸಿದ್ದರು.