ಬಾಳೆಹೊನ್ನೂರು ಸಮೀಪದ ಕೆಮ್ಮಣ್ಣು ಕಾಮಧೇನು ಗೋಸೇವಾ ಕೇಂದ್ರಕ್ಕೆ ಗೋವುಗಳನ್ನು ಹಸ್ತಾಂತರಿಸಿದ ಪಿಎಸ್‌ಐ ಬಾಬು ಎಸ್. ಅಗೆರ ಅವರನ್ನು ಗೋಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಗೌರವಿಸಿದರು. ರವಿನಾಯ್ಕ ಇದ್ದರು.  
ನ್ಯೂಸ್

ವಶಪಡಿಸಿಕೊಂಡ ಗೋವುಗಳು ಗೋಶಾಲೆಗೆ

ಬಾಳೆಹೊನ್ನೂರು: ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದಿಂದ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾಗ ದಾಳಿ ನಡೆಸಿ ವಶಪಡಿಸಿಕೊಂಡ ಆರು ಗೋವುಗಳನ್ನು ಪೊಲೀಸರು ಮಂಗಳವಾರ ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋಶಾಲೆಗೆ ಹಸ್ತಾಂತರಿಸಿದರು.

ಕಾಮಧೇನು ಗೋಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಈ ಕುರಿತು ಮಾಹಿತಿ ನೀಡಿ, ಕಳಸ ತಾಲೂಕು ಬಾಳೆಹೊಳೆ ಸೈಟ್‌ನಿಂದ ಹಾಸನ ಮೂಲದವರು ಆರು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದಾಳಿ ನಡೆಸಿ ಗೋವುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಹಾಗೂ ಬಜರಂಗದಳದ ಕಾರ್ಯಕರ್ತರ ಶ್ರಮದ ಲವಾಗಿ ಗೋವುಗಳು ಬದುಕುಳಿದಿವೆ ಎಂದರು.

ಅಕ್ರಮ ಗೋಸಾಗಣೆ, ಗೋಹತ್ಯೆ ಕಾಯ್ದೆ ನಿಷೇಧವಿದ್ದರೂ ಕೆಲವರು ಕ್ರೂರ ಕೃತ್ಯಗಳನ್ನು ನಡೆಸುತ್ತಿರುವುದು ಖಂಡನೀಯ. ಕಳಸ ಭಾಗದಲ್ಲಿ ಬಜರಂಗದಳದ ಕಾರ್ಯಕರ್ತರಾದ ಅಜಿತ್ ಕಳಸ, ಜಗದೀಶ್ ಭಟ್, ಕಾರ್ತಿಕ್ ಹಾಗೂ ಉಮೇಶ್ ಅಕ್ರಮ ಗೋ ಸಾಗಣೆ ತಡೆಯುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ರಕರಣದಲ್ಲಿ ಪಿಎಸ್‌ಐ ಬಾಬು ಎಸ್.ಅಗೆರ, ಎಎಸ್‌ಐ ರವಿನಾಯ್ಕ, ಸಿಬ್ಬಂದಿ ಪ್ರಮೋದ್, ಮಂಜುನಾಥ್ ಕಾರ್ಯನಿಷ್ಠೆ ಮೆರೆದಿದ್ದಾರೆ ಎಂದು ತಿಳಿಸಿದರು. ಇವರ ಸೇವಾ ಕಾರ್ಯಕ್ಕೆ ಗೋಶಾಲೆ ಗೌರವಿಸಿದೆ ಎಂದು ತಿಳಿಸಿದ್ದಾರೆ.