ನ್ಯೂಸ್

ವರ್ಗಾವಣೆ ಕೌನ್ಸೆಲಿಂಗ್‌ಗೆ ಸಾವಿರಾರು ಶಿಕ್ಷಕರು ಹಾಜರ್

ಹಾಸನ: ಶಿಕ್ಷಕರ ಅಂತರ್‌ಜಿಲ್ಲಾ ವರ್ಗಾವಣೆಯ ಮೊದಲ ದಿನದ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದ್ದು, ಒಟ್ಟು 3,422 ಜನ ಪ್ರಾಥಮಿಕ ಶಿಕ್ಷಕರು ವಗಾವಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು ತಿಳಿಸಿದರು.
ನಗರದ ಮಹಾವೀರ ವೃತ್ತದ ಬಳಿ ಇರುವ ಕ್ಷೇತ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ನಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 2024-25ನೇ ಸಾಲಿನ ಅಂರತ್‌ಜಿಲ್ಲಾ ವರ್ಗಾವಣೆ ಕೌನ್ಸೆಲಿಂಗ್ ನಡೆಯುತ್ತಿದೆ. ಈಗಾಗಲೇ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೌನ್ಸೆಲಿಂಗ್ ಮುಗಿದಿದ್ದು, ಸಹ ಶಿಕ್ಷಕರು ಸೇರಿ ಒಟ್ಟು 3,422 ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಹಾಕಿದ್ದಾರೆ. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಕ್ಷಕರ ವರ್ಗಾವಣೆಗೆ ಅರ್ಜಿ ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ಗೊಂದಲವಿಲ್ಲದೆ ಉತ್ತಮವಾಗಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಮೂರು ದಿನಗಳ ಕಾಲ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಬುಧವಾರ ಮತ್ತು ಗುರುವಾರ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ನಡೆದು, ಶುಕ್ರವಾರ ಪ್ರೌಢಶಾಲಾ ವಿಭಾಗದು ಕೌನ್ಸೆಲಿಂಗ್ ನಡೆಯಲಿದೆ. ರಾಜ್ಯ ಮಟ್ಟದಲ್ಲಿ ನಡೆಯುವಂತೆ ಜಿಲ್ಲೆಯಲ್ಲೂ ಕೌನ್ಸೆಲಿಂಗ್ ನಿಯಮಾನುಸಾರ ನಡೆಯುತ್ತಿದೆ. ವರ್ಗಾವಣೆಗೆ ಬಂದ ಶಿಕ್ಷಕರು ತಮ್ಮ ತಮ್ಮ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಶಿಕ್ಷಕರು ಹೋದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಆ ಶಾಲೆಗೆ ಹೆಸರನ್ನು ತಂದುಕೊಡಬೇಕು ಎಂದು ಕಿವಿಮಾತು ಹೇಳಿದರು.