ನ್ಯೂಸ್

ವರ್ಗಾವಣೆ ಕೌನ್ಸೆಲಿಂಗ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸಿ: ಆರೋಗ್ಯ ಸಚಿವರ ಸೂಚನೆ

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಎಂಟು ವರ್ಷಗಳ ಬಳಿಕ ನಡೆಯುತ್ತಿರುವ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಸೆಪ್ಟೆಂಬರ್ ಮೊದಲ ವಾರದೊಳಗೆ ಪೂರ್ಣಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಆರೋಗ್ಯ ಸೌಧದಲ್ಲಿ ಸೋಮವಾರ ಅಧಿಕಾರಗಳೊಂದಿಗೆ ಇಲಾಖೆ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಸೆಪ್ಟೆಂಬರ್ ಮೊದಲ ವಾರದಲ್ಲಿ ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಾಗಬೇಕು ಎಂದು ಹೇಳಿದರು.

ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಏಕರೂಪ ವೇತನ ಜಾರಿ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಕಂಡು ಬಂದರೆ ಸಹಿಸುವುದಿಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಔಷಧ ಪೂರೈಕೆಯಲ್ಲಿ ಸುಧಾರಣೆ: ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಹಿಂದೆ ಕೇವಲ ಶೇ. 30 ಔಷಧಗಳು ನಿಗಮದಿಂದ ಸರಬರಾಜು ಆಗುತ್ತಿತ್ತು. ಇದೀಗ ಶೇ. 64 ಔಷಧಗಳು ಆಸ್ಪತ್ರೆಗಳಿಗೆ ರವಾನೆಯಾಗುತ್ತಿವೆ. ಇದು ಶೇ. 90ಕ್ಕೆ ಏರಿಕೆಯಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಆಗದಂತೆ ಕ್ರಮ ವಹಿಸಬೇಕು ಎಂದು ಔಷಧ ಸರಬರಾಜು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಗಳು ಅಗತ್ಯಕ್ಕೆ ಅನುಗುಣವಾಗಿ ಸ್ಥಳೀಯ ಮಟ್ಟದಲ್ಲಿ ಎಬಿಎಆರ್‌ಕೆ ನಿಧಿಯಲ್ಲಿ ಶೇ. 10 ಔಷಧ ಖರೀದಿಸಬಹುದು. ಆದರೆ ಈ ನಿಧಿಯನ್ನು ಔಷಧ ಖರೀದಿಗೆ ಪೂರ್ಣ ಬಳಸಿದರೆ ಅಸ್ಪತ್ರೆಗಳ ಅಭಿವೃದ್ಧಿ ಕುಂಠಿತಗೊಳ್ಳಬಹುದು ಎಂದ ಅವರು, ಔಷಧ ಸರಬರಾಜು ನಿಗಮಿಂದ ಔಷಧ ಪೂರೈಕೆಯಾದರೆ ಈ ನಿಧಿಯನ್ನು ಆಸ್ಪತ್ರೆಗಳಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬಹುದು ಎಂದರು.

ಆರೋಗ್ಯ ಸೇವೆಗಳ ಕುರಿತು ಸಾರ್ವಜನಿಕರ ದೂರುಗಳಿಗೆ 104 ಸಹಾಯವಾಣಿಗೆ ಪರ್ಯಾಯವಾಗಿ 112 ಸಹಾಯವಾಣಿ ಆರಂಭಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.