ಅರಕಲಗೂಡು: ವರುಣನ ರೌದ್ರಾವತರಕ್ಕೆ ಶನಿವಾರ ರಾತ್ರಿ ತಾಲೂಕಿನ ದುಮ್ಮಿ- ಮಲ್ಲಾಪುರ ಕೆರೆ ಮತ್ತೊಮ್ಮೆ ಉಕ್ಕಿ ಹರಿದು ರಸ್ತೆ ಕೊಚ್ಚಿ ಹೋಗಿ ಕೃಷಿ ಜಮೀನು ಮೇಲೆ ಸಾಗರದಂತೆ ನೀರು ನುಗ್ಗಿ ಹಾನಿಯಾಗಿದೆ.
ಮಲ್ಲಾಪುರ ಮೇಲ್ಭಾಗದಿಂದ ಹಲವಾರು ಕೆರೆಗಳ ನೀರು ಈ ಕೆರೆಗೆ ನುಗ್ಗುತ್ತಿದ್ದು ಉಕ್ಕೇರಿ ಭೋರ್ಗರೆದು ನುಗ್ಗುತ್ತಿದೆ. ಪರಿಣಾಮವಾಗಿ ಸಂತೆಮರೂರು, ಇಲ್ಲಹಳ್ಳಿ, ದುಮ್ಮಿಕೊಪ್ಪಲು, ಜೋಡಿ ಗುಬ್ಬಿ ಮಾರ್ಗದ ರಸ್ತೆ ಜಲಾವೃತಾಗಿ ಸಂಚಾರಕ್ಕೆ ಅಡಚಣೆಯಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಕೆರೆ ಕೋಡಿ ಬಿದ್ದು ಗುಬ್ಬಿ ಮಾರ್ಗದ ರಸ್ತೆ ಅರ್ಧಭಾಗ ತುಂಡಾಗಿತ್ತು. ಅಧಿಕಾರಿಗಳು ನೆಪಮಾತ್ರಕ್ಕೆ ತಡೆಗೋಡೆ ಹಾಕಿದ್ದರು. ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಮಾಜಿ ಶಾಸಕ ಎ. ಮಂಜು ಓಟಿಗಾಗಿ ಗಿಮಿಕ್ ರಾಜಕಾರಣ ಮಾಡಲು ಬಂದು ಹೋದರೆ ರಸ್ತೆ ಸರಿಪಡಿಸಲು ಆಗಲಿಲ್ಲ. ಮತ್ತೊಮ್ಮೆ ಕೆರೆ ನೀರು ಸಾಗರದಂತೆ ಉಕ್ಕೆ ರಸ್ತೆ ಮೇಲೆ ಹರಿದು ಅಚ್ಚುಕಟ್ಟು ಭಾಗದ ಕೃಷಿ ಭೂಮಿ ಮೇಲೆ ನುಗ್ಗುತ್ತಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಜನರು ತತ್ತರಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.