ಚಿತ್ರದುರ್ಗ: ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಉಂಟಾದ ನಂತರ ಕಾರ್ಯಾಚರಣೆಯಲ್ಲಿ ತೊಡಗಿರುವ ಅಲ್ಲಿನ ಜಿಲ್ಲಾಧಿಕಾರಿ ಡಿ.ಆರ್.ಮೇಘಾಶ್ರೀ ಚಿತ್ರದುರ್ಗದ ಮಗಳು.
ದುರಂತದ ವಿಷಯ ತಿಳಿದ ದಿನದಂದು ಮೇಘಾಶ್ರೀ ರಾತ್ರಿಯಿಂದಲೇ ತಂಡಗಳನ್ನು ನಿಯೋಜಿಸಿ, ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ.
ತಂದೆ ಎಸ್.ರುದ್ರಮುನಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭೂ ಕುಸಿತ ಆರಂಭವಾದ ದಿನ ನಾನೂ ವಯನಾಡಿನಲ್ಲಿದ್ದೆ. ಸಂಜೆ ಬೆಂಗಳೂರಿಗೆ ವಾಪಸ್ ಬಂದೆವು. ಮಾಧ್ಯಮಗಳಲ್ಲಿ ದುರಂತ ಕಂಡು ನಮಗೂ ಗಾಬರಿಯಾಯಿತು ಎಂದರು.
ಜನಸೇವೆ ಮಾಡಲು ಮಗಳಿಗೆ ಅವಕಾಶ ದೊರೆತಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಕರ್ತವ್ಯ ನಿರ್ವಹಿಸಲು ಹೇಳಿದ್ದೇನೆ. ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಕುರಿತು ಕುಟುಂಬಕ್ಕೂ ಹೆಮ್ಮೆ ಇದೆ. ಇನ್ನೆರಡು ದಿನಗಳಲ್ಲಿ ನಾವು ವಯನಾಡಿಗೆ ಹೋಗಲಿದ್ದೇವೆ ಎಂದು ಹೇಳಿದರು.
ಜುಲೈ 10ರಂದು ವಯನಾಡಿಗೆ ಜಿಲ್ಲಾಧಿಕಾರಿಯಾಗಿ ಮಗಳು ಹೋಗಿದ್ದು, ಕಣ್ಣೋರು, ತಿರುವನಂತಪುರಂ, ಕಾಸರಗೂಡಿನಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಮೇಘಾಶ್ರೀ ಐಎಎಸ್ ಅಧಿಕಾರಿಯಾಗಿ ವಯನಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ಗ್ರಾಮಸ್ಥರಲ್ಲೂ ಸಂತಸವಿದೆ.