ಶೃಂಗೇರಿ: ಮಲೆನಾಡಿನ ಕಾಡುಗಳಲ್ಲಿರುವ ಔಷಧೀಯ ಸಸ್ಯಗಳು, ಹಣ್ಣು, ಗುಡಿಕೈಗಾರಿಕೆಗೆ ಬಳಸುವ ಬಳ್ಳಿ ಮತ್ತು ಗಿಡಗಳ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಬೇಕಿದೆ ಎಂದು ಜೆಸಿಬಿಎಂ ಕಾಲೇಜಿನ ಉಪನ್ಯಾಸಕ ಡಾ. ಕುಮಾರಸ್ವಾಮಿ ಉಡುಪ ಹೇಳಿದರು.
ನೆಮ್ಮಾರ್ ಗ್ರಾಪಂ ಹೊಸದೇವರಹಡ್ಲಿನಲ್ಲಿ ಅಜಸ್ರ ಟ್ರಸ್ಟ್‌ನಿಂದ ಶನಿವಾರ ಏರ್ಪಡಿಸಿದ್ದ ಎರಡು ದಿನದ ಮಲೆನಾಡಿನ ವೈವಿಧ್ಯಗಳ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಪಶ್ಚಿಮ ಘಟ್ಟಗಳ ಅರಣ್ಯದಲ್ಲಿ ನಾನಾ ರೀತಿಯ ವನ್ಯಸಂಪತ್ತು ಇದ್ದು, ಅವುಗಳ ವೈಜ್ಞಾನಿಕ ಸಂಶೋಧನೆ ಅಗತ್ಯ. ಅಧ್ಯಯನ ಮಾಡಿ ದತ್ತಾಂಶದಲ್ಲಿ ಕ್ರೋಡೀಕರಿಸಿ ತಂತ್ರಾಂಶದಲ್ಲಿ ಅಳವಡಿಸಬೇಕಿದೆ. ಅಧ್ಯಯನಕ್ಕೆ ಬಂದಿರುವ ವಿದ್ಯಾರ್ಥಿಗಳು, ಸಂಶೋಧನೆ ಕೈಗೊಂಡಿರುವ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಲೇಖನ ಬರೆಯುವ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ಉಡುಪಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಕೇಶವಮೂರ್ತಿ ಮಾತನಾಡಿ, ಹವಾಮಾನ ಬದಲಾವಣೆಯಿಂದ ಮಲೆನಾಡಿನ ಗಿಡ, ಮರ ಹೇಗೆ ಸ್ಪಂದಿಸುತ್ತವೆ. ಜಿರಕ, ರಂಜ, ಬೆಂಬರಲು, ಕಲ್ಲುಸಂಪಿಗೆ, ಕರ್ಜಿ ಹಣ್ಣಿನ ಸಹಿತ ಕಾಡು ಹಣ್ಣಿನ ಮಾಹಿತಿ ಪಡೆಯುವುದು. ಗುಡಿ ಕೈಗಾರಿಕೆಗೆ ಬಳಸುವ ಬೆತ್ತ, ಬಿದಿರು, ಹಿಟ್ಟುಂಡೆ, ಈಚಲು ಮುಂತಾದ ಗಿಡ, ಬುಟ್ಟಿ ತಯಾರಿಕೆಗೆ ಬಳಸುವ ಹೆಡಿಗೆಬೀಳು ಸಹಿತ ಬಳ್ಳಿ ಮತ್ತು ಗಿಡಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ದಾಖಲಿಕರಿಸುವುದು ಅಗತ್ಯವಾಗಿದೆ ಎಂದರು.
ಅಜಸ್ರ ಟ್ರಸ್ಟ್ ಅಧ್ಯಕ್ಷ ಡಾ. ಅಭಿಜಿತ್ ಮಾತನಾಡಿ, ಅಧ್ಯಯನಶೀಲ ವಿದ್ಯಾರ್ಥಿಗಳಿಗೆ ಟ್ರಸ್ಟ್ ಮೂಲಕ ತರಬೇತಿ, ಮಾಹಿತಿ ನೀಡಲಾಗುತ್ತಿದೆ ಎಂದರು.
ತರಬೇತಿಯಲ್ಲಿ ಶಿವಮೊಗ್ಗ, ಬೆಂಗಳೂರು, ಹಾವೇರಿ, ಸಾಗರದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಶ್ರವಣಕುಮಾರ್, ಸ್ಥಳೀಯರಾದ ಸುಂದರೇಶ್, ತಾಳಕೋಡು ವೆಂಕಟೇಶ ಭಟ್, ಸಂಸ್ಥೆ ಕಾರ್ಯದರ್ಶಿ ಶಶಾಂಕ್ ಇದ್ದರು.