ನ್ಯೂಸ್

ವನ್ಯಜೀವಿ ಸಂರಕ್ಷಣೆ, ಸರ್ವರ ಹೊಣೆ: ವಿಜಯವಾಣಿ ಕ್ಲಬ್​ಹೌಸ್ ‘ವನ್ಯಜೀವಿ ಸಂಕುಲ ಕುರಿತ ಸಂವಾದ’

ಅ.2ರಿಂದ 8- ವನ್ಯಜೀವಿ ಸಪ್ತಾಹ. ಇದರ ಅಂಗವಾಗಿ ವಿಜಯವಾಣಿ ಕ್ಲಬ್​ಹೌಸ್ ‘ವನ್ಯಜೀವಿ ಸಂಕುಲ ಕುರಿತ ಸಂವಾದ’ ಆಯೋಜಿಸಿತ್ತು. ವನ್ಯಜೀವಿಗಳನ್ನು ಬೇರೆಯವರಿಗಾಗಿ ಮಾತ್ರವಲ್ಲ, ಮನುಕುಲದ ಉಳಿಗಾಗಿ ಸಂರಕ್ಷಣೆ ಮಾಡಿಕೊಳ್ಳಬೇಕಿದೆ. ಮಾನವನ ಯಾವುದೇ ನೆರವು ಅಥವಾ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಜೀವಿಸುವ ಕಾಡು ಪ್ರಾಣಿಗಳನ್ನು ಅವುಗಳ ಆವಾಸ ಸ್ಥಾನದಲ್ಲಿಯೇ ಸಂರಕ್ಷಣೆ ಮಾಡಲು ಶಪಥ ಮಾಡಬೇಕಿದೆ ಎಂದು ವನ್ಯಜೀವಿ ತಜ್ಞರು, ವನ್ಯಜೀವಿ ವಿಜ್ಞಾನಿಗಳು, ಪಕ್ಷಿ ಹಾಗೂ ಪರಿಸರ ಪ್ರೇಮಿಗಳ ಒಕ್ಕೂರಲ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಗಿದೆ. ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಬಿ. ಗೌಡ, ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ, ಜೋಸೆಫ್ ಹೂವರ್, ಸುನೀಲ್ ಬಾರ್ಕರ್, ಬಾಲಚಂದ್ರ ಸಾಯಿಮನೆ, ಪರಿಸರ ಪ್ರೇಮಿ ಡಾ.ಎಸ್.ವಿ.ನರಸಿಂಹನ್ ಹಾಗೂ ಪಕ್ಷಿ ತಜ್ಞ ಕೇಶವಮೂರ್ತಿ ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಅರಿವಿನ ಕೊರತೆ

ಮನುಷ್ಯನ ನೆರವಿಲ್ಲದೆ ವಾಸ ಮಾಡುವ ವನ್ಯಜೀವಿಗಳ ಸಮೂಹ ಹಾಗೂ ಅವುಗಳ ಸಂಖ್ಯೆಯನ್ನು ಅವುಗಳ ಆವಾಸ ಸ್ಥಾನದಲ್ಲಿಯೇ ಸಂರಕ್ಷಣೆ ಮಾಡುವುದು ನೈಜ ವನ್ಯಜೀವಿ ಸಂರಕ್ಷಣೆಯಾಗಿದೆ. ಆದರೆ ನಾಯಿ, ಕತ್ತೆ, ಬೆಕ್ಕು, ಕುದುರೆ ಅಥವಾ ಹಸುಗಳಿಗೆ ಗಾಯವಾಗಿದ್ದರೆ, ಅವುಗಳನ್ನು ಉಪಚರಿಸಿ ಸಂರಕ್ಷಣೆ ಮಾಡುವುದು ಪ್ರಾಣಿದಯೆ. ಕೆಲವರಿಗೆ ಈ ಬಗ್ಗೆ ಅರಿವಿನ ಕೊರತೆಯಿದ್ದು, ಅದನ್ನು ವನ್ಯಜೀವಿ ಸಂರಕ್ಷಕರು ಅರ್ಥ ಮಾಡಿಸಬೇಕಿದೆ. ಕಾಡಿನಲ್ಲಿ ಪ್ರಾಣಿಗಳಿಗೆ ದಾಳಿಯಾಗಿದೆ ಎಂದು ಮೃಗಾಲಯ ಅಥವಾ ನಗರಕ್ಕೆ ತಂದು ಚಿಕಿತ್ಸೆ ಕೊಡಿಸಿ ಆಹಾರ ನೀಡಿದರೆ ಅದು ವನ್ಯಜೀವಿ ಸಂರಕ್ಷಣೆ ಆಗುವುದಿಲ್ಲ.

| ಸಂಜಯ್ ಗುಬ್ಬಿ ವನ್ಯಜೀವಿ ವಿಜ್ಞಾನಿ

ಪ್ರಾಣಿಗಳ ಸಂಚಾರಕ್ಕೆ ಯೋಜನೆ ರೂಪಿಸಿ

ಬೆಂಗಳೂರು, ಮೈಸೂರು ಅಥವಾ ನಗರ ಪ್ರದೇಶದಲ್ಲಿ ರಸ್ತೆ, ಕೆರೆ, ಮರಗಳ ರಕ್ಷಣೆ ಮೂಲಕ ವನ್ಯಜೀವಿ ಸಂರಕ್ಷಣೆ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಎಷ್ಟೋ ಬಾರಿ ವನ್ಯಜೀವಿ ಸಂರಕ್ಷಣೆ ಪ್ರಯತ್ನಗಳು ನೈಜ ಸ್ಥಿತಿಗಿಂತ ಬೇರೆಯೇ ಆಗಿರುತ್ತವೆ. ಪಶ್ಚಿಮ ಘಟ್ಟಕ್ಕಿಂತ ಅಧಿಕವಾಗಿ ಹಚ್ಚ ಹಸಿರಾಗಿರುವ ಉತ್ತರ ಕನ್ನಡದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಅವುಗಳು ಎಲ್ಲೆಡೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಯೋಜನೆ ರೂಪಿಸಬೇಕಿದೆ. ಪ್ರತಿಯೊಂದು ಪ್ರಾಣಿಗಳೂ ಬೇರೆ ಬೇರೆ ಆಹಾರ ತಿನ್ನುವ ಅಭಿಲಾಷೆ ಹೊಂದಿರುತ್ತವೆ. ಹೀಗಾಗಿ ಅಭಯಾರಣ್ಯ ಮತ್ತು ಕಾಡಿನ ಪಕ್ಕದ ಕೃಷಿ ಜಮೀನಿನಲ್ಲಿ ಕೋತಿ, ನವಿಲು ಮತ್ತು ಹಂದಿಗಳು ಸುಲಭವಾಗಿ ಆಹಾರ ಸಿಗುವ ಕೃಷಿ ಭೂಮಿಗಳಿಗೆ ಲಗ್ಗೆ ಇಡುತ್ತವೆ. ಈ ಕಾಡು ಪ್ರಾಣಿಗಳಲ್ಲಿ ಸ್ವಲ್ಪ ಬುದ್ಧಿವಂತ ಪ್ರಾಣಿಗಳಾದ ಮಂಗಗಳು ಮುಖ್ಯವಾಗಿ ಒಂದು ನಿಗದಿತ ದಿನಗಳಲ್ಲಿ ಮಾತ್ರ ತೋಟಗಳಿಗೆ ದಾಳಿ ಮಾಡುತ್ತವೆ. ಅವುಗಳಿಗೆ ನಿಗದಿತ ದಿನದಂದು ಪ್ರತಿರೋಧ ಒಡ್ಡುವ ಮೂಲಕ ತೋಟಗಳನ್ನು ಸಂರಕ್ಷಣೆ ಮಾಡಬಹುದು. ಹಂದಿಗಳಿಗೆ ಭಾರಿ ಗಾತ್ರದ ಶಬ್ದ ಮತ್ತು ಇತರ ಕ್ರಮಗಳಿಂದ ಬೆಳೆ ರಕ್ಷಿಸಿಕೊಳ್ಳಬಹುದು.

| ಬಾಲಚಂದ್ರ ಸಾಯಿಮನೆ ವನ್ಯಜೀವಿ ಮತ್ತು ಪರಿಸರ ತಜ್ಞ

ಅಭಿವೃದ್ಧಿ ನೆಪದಲ್ಲಿ ಮರಗಳ ಹನನ

ಬೆಳಗಾವಿ- ಗೋವಾ, ಹುಬ್ಬಳ್ಳಿ- ಅಂಕೋಲಾ, ಹುಬ್ಬಳ್ಳಿ- ಶಿರಸಿ, ಶರಾವತಿ ನದಿ ಹಿನ್ನೀರಿನ ಭಾಗವಾದ ಸಿಗಂಧೂರು ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ವಣ, ತೀರ್ಥಹಳ್ಳಿ- ಮಲ್ಪೆ ರಸ್ತೆ, ಶಿವಮೊಗ್ಗ- ಕುದುರೆಮುಖ ರಸ್ತೆ ಅಗಲೀಕರಣ, ಮೂಡಿಗೆರೆ ಬಳಿ ಹೆದ್ದಾರಿ ನಿರ್ಮಾಣ ಹೀಗೆ ರಸ್ತೆ ನಿರ್ವಣಕ್ಕೆ ಸರ್ಕಾರ ಯೋಜನೆ ರೂಪಿಸಿ ಲಕ್ಷಾಂತರ ಮರಗಳ ಹನನ ಮಾಡುತ್ತಿದೆ. ಇನ್ನು ಹೊಸದಾಗಿ ಸಾಗರ- ಹೊನ್ನಾವರ, ಚಿಕ್ಕಮಗಳೂರು- ಶೃಂಗೇರಿ ಹಾಗೂ ಮೈಸೂರು-ಕೇರಳಕ್ಕೆ ರೈಲ್ವೆ ಮಾರ್ಗ ನಿರ್ವಣದ ಯೋಜನೆಗಳು ಸಿದ್ಧವಾಗುತ್ತಿವೆ. ಪರಿಸರ ಸಂರಕ್ಷಣಾವಾದಿಗಳು ಕೋರ್ಟ್​ಗೆ ಹೋಗಿಯೇ ಕಾಡಿನ ಸಂರಕ್ಷಣೆ ಮಾಡುತ್ತಿದ್ದು, ಸ್ಥಳೀಯ ಜನಪ್ರತಿನಿಧಿ ಗಳು ಹಾಗೂ ಸಂಘಟನೆಗಳು ನಿಶ್ಯಕ್ತಿ ಹೊಂದಲು ಕಾರಣವೇನು ಎಂಬ ಅನುಮಾನ ಕಾಡುತ್ತಿದೆ.

| ಸಹದೇವ್ ಪರಿಸರ ಸಂರಕ್ಷಕ

ಪರಿಸರ, ಪ್ರಕೃತಿ ವಿನಾಶಕ್ಕೆ ಮನುಷ್ಯನೇ ಕಾರಣ

ನಮ್ಮ ಜೀವಿತಾವಧಿಯಲ್ಲಿ ಪರಿಸರ ಬಹಳಷ್ಟು ಹಾನಿಯಾಗಿದೆ. ಹೀಗಾದರೆ ನಮ್ಮ ಪೂರ್ವಜರ ಕಾಡು ಎಷ್ಟು ವಿಸ್ತಾರ ಆಗಿರಬಹುದು. ಪರಿಸರ ಮಾಲಿನ್ಯಕ್ಕೆ ಮನುಷ್ಯರೇ ಪ್ರಮುಖ ಕಾರಣ. ಪೃಕೃತಿ ಹಾಳಿಗೂ ಕಾರಣವಾಗಿರುವುದರಿಂದ ಅದರ ಸಂರಕ್ಷಣೆ ಕೂಡ ಮನುಷ್ಯರೇ ಮಾಡಬೇಕು. ಪರಿಸರ ತನ್ನನ್ನು ತಾನೇ ಸಂರಕ್ಷಿಸಿಕೊಳ್ಳುತ್ತದೆ. ಈಗ ಪರಿಸರ ಸಂರಕ್ಷಣೆ ಮಾಡಿಕೊಳ್ಳಬೇಕಾಗಿರುವುದು ಬೇರೆ ಯಾರಿಗೋ ಅಲ್ಲದೆ ನಮಗಾಗಿ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಪ್ರಕೃತಿವಿಕೋಪ ಸಂಭವಿಸಿ ಭೂಮಿಯಲ್ಲಿ ವಿನಾಶ ಆಗುವುದಿದ್ದರೆ, ಅದರಲ್ಲಿ ಮೊದಲಿಗರು ಮನುಷ್ಯರೇ ಆಗಿರುತ್ತಾರೆ. ಹೀಗಾಗಿ ನಾವೇ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿರುವುದು ಅತ್ಯಗತ್ಯವಾಗಿದೆ.

| ಡಾ.ಎಸ್.ವಿ.ನರಸಿಂಹನ್ ಪರಿಸರ ಪ್ರೇಮಿ

ಪಕ್ಷಿಗಳನ್ನು ಸಂರಕ್ಷಿಸದಿದ್ರೇ ಕೀಟಗಳು ಮನೆಗೆ ಬರ್ತಾವೆ..

ನಾವು ಪಕ್ಷಿಗಳನ್ನು ಸಂರಕ್ಷಣೆ ಮಾಡಲಿಲ್ಲವಾದರೆ, ಅವು ತಿನ್ನುವ ಕೀಟಗಳು ನಮ್ಮ ಮನೆ ಸೇರುತ್ತವೆ ಎಂಬ ಎಚ್ಚರಿಕೆ ಮನುಷ್ಯನಿಗೆ ಇರಬೇಕು. ಪ್ರಪಂಚದಲ್ಲಿ 2,200 ಪಕ್ಷಿಗಳಿವೆ. ಇವುಗಳಲ್ಲಿ 182 ಪಕ್ಷಿಗಳು ಅಳಿವಿನ ಅಂಚಿನಲ್ಲಿವೆ. ಈ ಪೈಕಿ 65 ಕರ್ನಾಟಕ ಮತ್ತು 16 ಪಶ್ಚಿಮ ಘಟ್ಟದಲ್ಲಿವೆ. ಸಮೀಕ್ಷೆಗಳ ಪ್ರಕಾರ, ಈ ಪಕ್ಷಿಗಳು 400ರಿಂದ 500 ಮೆಟ್ರಿಕ್ ಟನ್ ಕೀಟಗಳನ್ನು ತಿನ್ನುತ್ತವಂತೆ. ಒಣ ಪ್ರದೇಶದಿಂದ ಸಮೃದ್ಧ ಕಾಡುಗಳವರೆಗೆ ಪ್ರತಿಯೊಂದು ಪ್ರದೇಶದಲ್ಲೂ ಪಕ್ಷಿಗಳಿವೆ. ಅವುಗಳಿಗೆ ಗೂಡು ಕಟ್ಟಲು ಉತ್ತಮ ವ್ಯವಸ್ಥೆ ಇಲ್ಲವಾದಲ್ಲಿ ತಮ್ಮ ಜಾಗ ಖಾಲಿ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ನಾವು ಪಕ್ಷಿಗಳಿಗೆ ಅವಶ್ಯವಾದ ಪರಿಸರ ನಿರ್ಮಾಣ ಮಾಡಿಕೊಡಬೇಕು. ಪರಾಗಸ್ಪರ್ಶ, ಬೀಜ ಪ್ರಸರಣ ಕ್ರಿಯೆಗೆ ಪಕ್ಷಿಗಳ ಪಾತ್ರ ಬಹಳ. ಇದರಿಂದ ನಾವು ಪಕ್ಷಿಗಳನ್ನು ಸಂರಕ್ಷಿಸಲು ಮುಂದಾಗಬೇಕು. ಮೊಬೈಲ್ ಟವರ್​ನಿಂದಾಗಿ ಗುಬ್ಬಚ್ಚಿಗಳು ಕಡಿಮೆಯಾಗಿವೆ ಎಂದು ಹೇಳುತ್ತಾರೆ. ನಾನು ಇದನ್ನು ನಂಬುವುದಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾಕಷ್ಟು ನೆಟ್​ವರ್ಕ್ ಟವರ್ ಇದೆ. ಆದರೂ, ಅಲ್ಲಿ ಇಂದಿಗೂ ಗುಬ್ಬಚ್ಚಿಗಳಿವೆ. ಏಕೆಂದರೆ, ಇಲ್ಲಿ ಗುಬ್ಚಚ್ಚಿ ಗೂಡು ಕಟ್ಟಲು ಬೇಕಾದ ವಾತಾವರಣ ಇದೆ. ಸಾವಯವ ಕೃಷಿ ಉತ್ಪನ್ನಗಳ ಸೇವನೆ ರೂಢಿಸಿಕೊಳ್ಳಬೇಕಿದೆ. ಆಗ ಮಾತ್ರ ಕೃಷಿ ಉತ್ಪನ್ನಗಳಿಗೆ ಕೀಟನಾಶಕ ಬಳಕೆ ಕಡಿಮೆಯಾಗಲಿದೆ. ಇದರಿಂದ ಪಕ್ಷಿಗಳು ಹೆಚ್ಚಾಗಿ ಇರಲು ಸಾಧ್ಯವಾಗಲಿವೆ.

| ಕೇಶವಮೂರ್ತಿ ಪಕ್ಷಿ ತಜ್ಞ

ಕೊನೆ ಎಂದು?

ಪರಿಸರ, ಪ್ರಾಣಿ ಸಂಕುಲ ಉಳಿದರಷ್ಟೇ ಮನುಷ್ಯನ ಉಳಿವು. ಇದನ್ನರಿತೂ ಮಾನವ ಪರಿಸರ ಹಾಗೂ ಪ್ರಾಣಿ ನಾಶಕ್ಕೆ ಬಿರುಸಿನ ಹೆಜ್ಜೆಯನ್ನಿಡುತ್ತಿದ್ದಾನೆ. ಇವುಗಳ ಕಾವಲುಗಾರನಂತಿರಬೇಕಾದ ಸರ್ಕಾರವೇ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶಕ್ಕೆ ಯೋಜನೆ ಮೇಲೆ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಇದಕ್ಕೆ ಕೊನೆಯೇ ಇಲ್ಲವೇ? ಹೀಗೆ ಮೊನಚಿನ ಮಾತುಗಳ ಮೂಲಕ ಆಳುವ ಸರ್ಕಾರ ಹಾಗೂ ಆಳಿಸಿಕೊಳ್ಳುವ ಪ್ರಜೆಗಳನ್ನು ಬಡಿದೆಚ್ಚರಿಸುವ ಪ್ರಯತ್ನವನ್ನು ವನ್ಯಜೀವಿ ತಜ್ಞ ಸುನೀಲ್ ಬಾರ್ಕರ್ ಸಂವಾದ ನಿರ್ವಹಿಸಿದರು.

ಕಾಡ್ಗಿಚ್ಚಿನ ಅರಿವು

ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ (ನೇಚರ್ ಆಂಡ್ ವೈಲ್ಡ್​ಲೈಫ್ ಕನ್ಸರ್ವೇಷನ್ ಕಮಿಟಿ-ಎನ್​ಡಬ್ಲ್ಯುಸಿಸಿ) ಎಂಬ ನಮ್ಮ ಸಂಸ್ಥೆಯಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಡ್ಗಿಚ್ಚಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹಾಡು, ಹಾಸ್ಯ, ನಾಟಕ ಮೂಲಕ ಜನರನ್ನು ಸುಲಭವಾಗಿ ತಲುಪುತ್ತಿದ್ದು, ಇದೇ ವೇಳೆ ಅರಣ್ಯ ಕಾಯ್ದೆ ಕುರಿತು ತಿಳಿಸಿಕೊಡಲಾಗುವುದು. ಜತೆಗೆ, ಚಿರತೆ-ಮಾನವ ಸಂಘರ್ಷದ ಕುರಿತೂ ಜಾಗೃತಿ ಮೂಡಿಸುತ್ತಿದ್ದೇವೆ. ನಾವು ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಬಳಿ ಗ್ರೇಟ್ ಇಂಡಿಯನ್ ಬಸ್ಟರ್ಡ್(ಎರ್ಲಡ್ಡು) ಎಂಬ ಅಳಿವಿನಂಚಿನಲ್ಲಿರುವ ಪಕ್ಷಿಯ ಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಅಲ್ಲಿನ ಜನ ಅದನ್ನು ನವಿಲು ಎಂದು ತಿಳಿದುಕೊಂಡಿದ್ದಾರೆ. ಆ ಪಕ್ಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದು, ಅದು ಸದ್ಯ 6 ಸಂಖ್ಯೆಯಲ್ಲಿ ಮಾತ್ರ ಇದ್ದು ಅವುಗಳ ಸಂತತಿ ಉಳಿಸಬೇಕಾಗಿದೆ ಎಂದು ಸ್ಥಳೀಯರಿಗೆ ತಿಳಿಸಿಕೊಡಲಾಗುತ್ತಿದೆ.

| ನಳಿನಿ ಬಿ ಗೌಡ ಎಂಡಿ, ಪರಿಸರ-ವನ್ಯಜೀವಿ ಹಿತರಕ್ಷಣಾ ಸಮಿತಿ

ರ್ಯಾಲಿ, ಟೀ-ಶರ್ಟ್ ಬದಲಿಸೋದು ಬಿಟ್ಟು ಹೋರಾಟ ಮಾಡಲು ಬನ್ನಿ...

ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರ ಹಾಳು ಮಾಡುತ್ತಿದ್ದೇವೆ. ಸಂರಕ್ಷಣೆಗಾಗಿ ರ‍್ಯಾಲಿ ಮಾಡೋದು, ಟೀ-ಶರ್ಟ್ ಬದಲಿಸಿ ಶೋಕಿ ಮಾಡೋದು ಬಿಟ್ಟು, ಹೋರಾಟ ಮಾಡಲು ಮುಂದಾಗಬೇಕು. ಸುಸ್ಥಿರ ಅಭಿವೃದ್ಧಿ ಅನ್ನೋ ಪದ ಕೇಳುತ್ತಲೇ ಬಂದಿದ್ದೇವೆ. ಆದರೆ, ಇದು ಅನುಷ್ಠಾನ ಮಾತ್ರ ಆಗುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕಾಡುಗಳ ಮಧ್ಯೆ ಅನವಶ್ಯಕವಾಗಿ ದೊಡ್ಡ ರಸ್ತೆಗಳನ್ನು ಮಾಡಲು ಸರ್ಕಾರ ಮುಂದಾಗಿದೆ. ಹೆಚ್ಚಾಗಿ ಪಶ್ಚಿಮ ಘಟ್ಟದಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಿದೆ. ಇದರಿಂದ ಪರಿಸರ ಹಾಳಾಗುವುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ಜನರಿಗೆ ಹಾಲಿ ಇರುವ ರಸ್ತೆಯನ್ನೇ ಅಭಿವೃದ್ಧಿ ಮಾಡಿದರೆ ಸಾಕಾಗಿದೆ. ಆದರೂ, ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡಲು ಮುಂದಾಗಿದೆ. ಇಂತಹ ಸನ್ನಿವೇಶದಲ್ಲಿ ಹೋರಾಟ ಮಾಡಬೇಕಾದ ಜನರು ಪಕ್ಷದ ಕಾರ್ಯಕರ್ತರಂತೆ ನಟಿಸುತ್ತಿರುವುದು ದುರಂತ. ಅರಣ್ಯ ಸಂರಕ್ಷಣೆಗಾಗಿ ರ‍್ಯಾಲಿ ಮಾಡೋದು, ಬಣ್ಣ ಬಣ್ಣದ ಟೀ ಶರ್ಟ್ ಹಾಕಿಕೊಂಡು ಪರಿಸರ ಉಳಿಸುವಂತೆ ಪ್ರಚಾರ ಮಾಡೋದು ಬಿಟ್ಟು, ನಾಶವಾಗುತ್ತಿರುವ ಪರಿಸರ ಉಳಿಸಲು ಜನರು ಮುಂದೆ ಬರಬೇಕು.

| ಜೋಸೆಫ್ ಹೂವರ್ ವನ್ಯಜೀವಿ ತಜ್ಞ