ಚಿತ್ರದುರ್ಗ: ಶರಣರ ತಮ್ಮ ವಚನಗಳಲ್ಲಿ ನಾವು ಅನೇಕ ವೈಜ್ಞಾನಿಕ ಅಂಶಗಳನ್ನು ಗುರುತಿಸಬಹುದಾಗಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಸ್ ಸಮೂಹ ಸಂಸ್ಥೆಗಳ ಶಾಲಾ ವಾರ್ಷಿಕೋತ್ಸವ ‘ಜ್ಞಾನ ಸಂಭ್ರಮ’ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶರಣರು ಸಾಮಾಜಿಕ, ಆಧ್ಯಾತ್ಮಿಕ ಸುಧಾರಣೆಗೆ ಒತ್ತು ನೀಡಿದ ಹಾಗೆ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳತ್ತಲೂ ಹೆಚ್ಚಿನ ಒಲವನ್ನು ತೋರಿದ್ದರು.
ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಒಂದೇ, ಬಾಹ್ಯ ಜಗತ್ತು ಮತ್ತು ಆಂತರಿಕ ಜಗತ್ತು ಎಂಬ ಎರಡು ಜಗತ್ತುಗಳಿವೆ. ಅನುಭವದಿಂದ ಈ ಎ ರಡು ಕ್ಷೇತ್ರಗಳಿಂದಲೂ ನಮಗೆ ಸತ್ಯ ದೊರಕುವುದು. ಆಂತರಿಕ ಅನುಭವದಿಂದ ಸಂಗ್ರಹಿಸಿರುವುದೇ ಮನಃಶಾಸ್ತ್ರ, ತತ್ವಶಾಸ್ತ್ರ ಮತ್ತು ಧ ರ್ಮ. ಬಾಹ್ಯ ಜಗತ್ತಿನಿಂದ ನಮಗೆ ಭೌತ ವಿಜ್ಞಾನ ದೊರಕುತ್ತದೆ. ಸತ್ಯವು ಯಾವ ಕ್ಷೇತ್ರಕ್ಕೆ ಸೇರಿದ್ದರೂ ವಿರೋಧವಿರುವುದಿಲ್ಲ. ಆಂತರಿಕ,ಬಾಹ್ಯ ಸತ್ಯಗಳ ನಡುವೆ ಪರಸ್ಪರ ವಿರೋಧವಿರುವುದಿಲ್ಲ.
ಶರಣರ ವಚನಗಳಲ್ಲಿ ಸಸ್ಯ, ಮಾನವೀಯ, ನೈತಿಕ, ಸಮಾಜ, ಮನೋ ಹಾಗೂ ಪ್ರಾಕೃತಿಕ ವಿಜ್ಞಾನಗಳು ಮತ್ತು ಅರ್ಥಶಾಸ್ತ್ರ ಹೀಗೆ ಏನೆಲ್ಲ ಮೇಳೈಸಿವೆ. ಶರಣರು ವಿಜ್ಞಾನದ ಜ್ಞಾನದ ಜತೆಗೆ ಇನ್ನೂ ಮಹತ್ವದ ಜ್ಞಾನವನ್ನು ಹೇಳಿದ್ದಾರೆ ಎಂದು ಶ್ರೀಗಳು ಪ್ರತಿಪಾದಿಸಿದರು.
ಜೀವನದಲ್ಲಿ ವಿಜ್ಞಾನದ ಪ್ರಸ್ತುತತೆ ಕುರಿತು ಮಾತನಾಡಿದ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಕಾರ‌್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ, ನಮ್ಮ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ, ವಿಜ್ಞಾನವಿಲ್ಲದೆ ಜೀವನ ಇಲ್ಲ ಎಂಬಂತಾಗಿದೆ. ವಿಜ್ಞಾನದ ಉಪಯೋಗ ಬಹಳ ಇದೆ. ಆದರೂ ಇದರ ಬಗ್ಗೆ ಅರಿವಿಲ್ಲದವರು ವಿಜ್ಞಾನವನ್ನು ದೂರುತ್ತಾರೆ, ಅಸಡ್ಡೆ ಮಾಡುತ್ತಿದ್ದಾರೆ ಎಂದರು.
ವಿಜ್ಞಾನಿಗಳ, ವಿಜ್ಞಾನದ ಕೊಡುಗೆಯನ್ನು ನಿತ್ಯ ಉಪಯೋಗ ಮಾಡುತ್ತೇವೆ, ಆದರೂ ಜನರು ಮೂಢನಂಬಿಕೆಗೆ ಮಾರು ಹೋಗುತ್ತಾರೆ. ವಿಜ್ಞಾನವನ್ನು ಬೋಧಿಸುವವರೂ ಮೂಢನಂಬಿಕೆಯನ್ನು ಪೋಷಿಸುತ್ತಿದ್ದಾರೆ ಎಂದರಲ್ಲದೇ, ನೈಸರ್ಗಿಕ ಗ್ರಹಣಗಳ ಬಗ್ಗೆ ಕೇಳಿ ಬರುವ ಮಾತುಗಳನ್ನು ಉದಾಹರಿಸಿದರು.
ಶ್ರೀ ಚನ್ನಬಸವ ಶ್ರೀಗಳು, ಎಸ್‌ಜೆಎಸ್ ಸಮೂಹ ಸಂಸ್ಥೆಗಳ ಕಾರ‌್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ತಿಪ್ಪೇಸ್ವಾಮಿ, ಮಂಜುನಾಥ್, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ‌್ಯದರ್ಶಿ ಲಕ್ಷ್ಮಣ್, ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ, ಮಾಜಿ ನಿರ್ದೇಶಕ ವೀರಣ್ಣ ಮತ್ತಿತರರು ಇದ್ದರು.