ನ್ಯೂಸ್

ವಚನ ಸಾಹಿತ್ಯದಲ್ಲಿದೆ ಜಗತ್ತಿಗೆ ಬೇಕಾದ ವಿವೇಕ

ಜಗತ್ತಿಗೆ ಬೇಕಾದ ವಿವೇಕ ವಚನ ಸಾಹಿತ್ಯದಲ್ಲಿದೆ ಎಂದು ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ತಿಳಿಸಿದರು.

ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ಸಹಯೋಗದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ಪ್ರಯುಕ್ತ ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚಕ್ಕೆ ಬೇಕಾದ ಜ್ಞಾನವೆಲ್ಲವೂ 12ನೇ ಶತಮಾನದ ವಚನ ಸಾಹಿತ್ಯದಲ್ಲಿದೆ ಎಂದು ಹೇಳಿದರು.

ಹಳಕಟ್ಟಿಯವರು ಕೈಗೊಂಡ ಸಂಶೋಧನಾ ಕಾರ್ಯವನ್ನು ವಚನ ಜೈತ್ರಯಾತ್ರೆ ಎಂದರೂ ತಪ್ಪಲ್ಲ. ಹೊಟ್ಟೆಬಟ್ಟೆ ಕಟ್ಟಿ ವಚನ ಸೌಧವನ್ನು ಕಟ್ಟಿದವರು. ನಿಜವಾದ ಕನ್ನಡತನ ಉಳಿದಿರುವುದು ಶರಣ ಸಾಹಿತ್ಯದಲ್ಲಿ. ನಮ್ಮ ನಾಡಿನ ಭಾಷೆ ಅಭಿವ್ಯಕ್ತಿ ಆಶಯಗಳು ವಚನ ಸಾಹಿತ್ಯದಲ್ಲಿದೆ. ಇಂದಿನ ವಿದ್ಯಾರ್ಥಿಗಳು ಶರಣರ ನಡುವೆ ನಡೆದ ತಾತ್ವಿಕ ವಿಚಾರಗಳೆಲ್ಲವನ್ನೂ ಅಧ್ಯಯನ ಮಾಡಬೇಕಿದೆ ಎಂದರು. ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ಉಪಾಧ್ಯಕ್ಷ ಎಂ.ಚಿನ್ನಸ್ವಾಮಿ, ಮ.ಗು.ಸದಾನಂದಯ್ಯ, ಪ್ರಾಂಶುಪಾಲ ಡಾ.ರೇಚಣ್ಣ, ದತ್ತಿದಾನಿಗಳಾದ ಶರಣಪ್ಪ ಸಮಂತ್ರಿ, ಕೆ.ಎಸ್.ಮೋಹನ್ ಕುಮಾರ್ ಇತರರಿದ್ದರು.