ನ್ಯೂಸ್

ವಕ್ಫ್ ಹೆಸರಿನಲ್ಲಿ ರೈತರಿಗೆ ನೋಟಿಸ್ ಖಂಡಿಸಿ ಪ್ರತಿಭಟನೆ

ವಕ್ಫ್ ಹೆಸರಿನಲ್ಲಿ ರೈತರಿಗೆ ನೋಟಿಸ್ ಖಂಡಿಸಿ ಪ್ರತಿಭಟನೆ

ವಕ್ಫ್ ಆಸ್ತಿಯ ಹೆಸರಿನಲ್ಲಿ ಸರ್ಕಾರ ರೈತರ ಜಮೀನುಗಳಿಗೆ ನೋಟಿಸ್ ನೀಡುತ್ತಿರುವುದನ್ನು ಖಂಡಿಸಿ ಬಿಜೆಪಿಯ ನಗರ ಘಟಕ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಮುಲ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಸಾಗಿದ ನೂರಾರು ಬಿಜೆಪಿ ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ವಿರುದ್ಧ ಧಿಕ್ಕಾರ ಕೂಗಿದರು. ಕಾಂಗ್ರೆಸ್ ತೊಲಗಲಿ, ರೈತರ ಜಮೀನು ಕಬಳಿಸಿದ ವಕ್ಫ್ ಗೂಂಡಾಗಿರಿಗೆ ಧಿಕ್ಕಾರ, ಕಾಂಗ್ರೆಸ್ ಲ್ಯಾಂಡ್ ಜಿಹಾದ್‌ಗೆ ಧಿಕ್ಕಾರ, ಪ್ರಾಣ ಕೊಟ್ಟೇವು ಭೂಮಿ ಬಿಡೆವು, ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟ ಸಿದ್ದರಾಮಯ್ಯಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಒಂದು ಸಮುದಾಯ ಓಲೈಕೆ ಮಾಡಲು ದೀನ-ದಲಿತರ, ಬಡವರ ಜಮೀನುಗಳಿಗೆ ನೋಟಿಸ್ ನೀಡಿ ಅವರಿಂದ ಭೂಮಿ ಕಿತ್ತುಕೊಳ್ಳುತ್ತಿದೆ. ಹಲವಾರು ದಶಕಗಳಿಂದ ಭೂಮಿಯ ಒಡೆತನ ಹೊಂದಿರುವ ರೈತರಿಗೆ ನೋಟಿಸ್ ನೀಡಿ ವಕ್ಫ್ ಆಸ್ತಿ ಎನ್ನುತ್ತಿದ್ದಾರೆ. ಸರ್ಕಾರದ ಈ ನಡೆಯನ್ನು ಬಿಜೆಪಿ ಉಗ್ರವಾಗಿ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಕೇವಲ ಬಾಯಿ ಮಾತನಲ್ಲಿ ಆಗದೆ, ಕೃತಿಯ ರೂಪದಲ್ಲಿ ಆಗಬೇಕು. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳಿಗೆ ಸರ್ಕಾರದ ಆದೇಶದ ಮೂಲಕ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ವಕ್ಫ್ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಪ್ರತಿ ಜಿಲ್ಲೆಗೂ ಹೋಗಿ ಅಧಿಕಾರಿಗಳೊಂದಿಗೆ ಕೂಡಿ ವಕ್ಫ್ ಅದಾಲತ್ ನಡೆಸುತ್ತಿದ್ದಾರೆ. ಅದಾಲತ್ ನಡೆಸುವ ನೆಪದಲ್ಲಿ ಬಡವರ ಆಸ್ತಿಯನ್ನು ಕಬಳಿಸುವ ಹುನ್ನಾರ ಅಡಗಿದೆ. ಸ್ವಾತಂತ್ರೃ ಬಂದಾಗಿನಿಂದ ಇಲ್ಲದ ಕಾನೂನು ಈ ಸರ್ಕಾರದ ಅವಧಿಯಲ್ಲಿ ಏಕೆ ಜಾರಿಯಾಗುತ್ತಿದೆ ಎಂದು ದೂರಿದರು.

ಈ ಪ್ರಕರಣದಿಂದಾಗಿ ಭೂಮಿಯ ಒಡೆತನ ಹೊಂದಿರುವವರು, ನಿವೇಶನಗಳನ್ನು ಹೊಂದಿರುವವರು ತಮ್ಮ ಆರ್‌ಟಿಸಿ ಹಾಗೂ ಮೂಲ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತಾಗಿದೆ. ಎಲ್ಲಿ ನಮ್ಮ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ಬಿಡುತ್ತಾರೋ ಎನ್ನುವ ಆಂತಕವೂ ಅವರಲ್ಲಿ ಮನೆ ಮಾಡಿದೆ. ಆದ್ದರಿಂದ ಸರ್ಕಾರ ರಾಜ್ಯದ ಜನರ ಹಿತ ಕಾಪಾಡಲು ಮುಂದಾಗಬೇಕು. ಪ್ರಸ್ತುತ ನಡೆಸುತ್ತಿರುವ ಅದಾಲತ್ ಹಾಗೂ ನೋಟಿಸ್ ನೀಡುವ ಪ್ರಕ್ರಿಯೆಗಳನ್ನು ಈಗಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ತಲತಲಾಂತರದಿಂದ ಉಳಿಮೆ ಮಾಡುವ ರೈತರ ಜಮೀನಿನ ಆರ್‌ಟಿಸಿಯಲ್ಲಿ ವಕ್ಫ್ ಹೆಸರು ನಮೂದಿಸಿ ರೈತರ ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ. ರಾಜ್ಯದಲ್ಲಿ ಪಿತೂರಿ ನಡೆಯುತ್ತಿದ್ದು, ವಕ್ಫ್ ಎನ್ನುವ ಭೂತ ಬಿಟ್ಟು ರೈತರ ಜಮೀನು ಕಬಳಿಸುತ್ತಿದೆ. ಇದನ್ನೆಲ್ಲಾ ನೋಡಿದರೆ ಘಜನಿ ಮಹಮ್ಮದ್ ಗೋರಿ ನೆನಪಾಗುತ್ತಿದ್ದು, ರಾಜ್ಯದಲ್ಲಿ ಸುಲ್ತಾನರ ಸಂಸ್ಕೃತಿ ಶುರುವಾಗಿದೆ ಎಂದು ಕಿಡಿಕಾರಿದರು.

ಕೂಡಲೇ ವಕ್ಫ್ ಎಂದು ನಮೂದು ಮಾಡಿರುವ ಎಲ್ಲ ನೋಟಿಸ್ ವಾಪಸ್ ಪಡೆದು, ಸರ್ಕಾರದ ರಾಜ್ಯ ಪತ್ರದಲ್ಲಿ ವಾಪಸ್ ಪಡೆದಿದ್ದೇವೆ ಎಂದು ಪ್ರಕಟಿಸಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಮಿರ್ಲೆ ಶ್ರೀನಿವಾಸ ಗೌಡ, ಹೇಮಂತ್‌ಕುಮಾರ್ ಗೌಡ, ರಾಕೇಶ್ ಗೌಡ, ಕಿರಣ್ ಗೌಡ, ಬಿ.ಎಂ.ರಘು, ಕೇಬಲ್ ಮಹೇಶ್, ರಮೇಶ್, ಹೇಮಾ ನಂದೀಶ್ ಇತರರು ಇದ್ದರು.