ನ್ಯೂಸ್

ಲೋಕಾಯುಕ್ತರು ಸಿಎಂ ಸಿದ್ದರಾಮಯ್ಯರನ್ನು ಬಂಧಿಸಲಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣದ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡಲೇ ಬಂಧಿಸಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಆಗ್ರಹಿಸಿದರು.

ಚುನಾವಣಾ ರಾಜಕೀಯವೇ ಬೇರೆ, ಈ ನೆಲದ ಕಾನೂನೇ ಬೇರೆ. ನೆಲದ ಕಾನೂನಿನ ಅನುಗುಣವಾಗಿ ಅವರನ್ನು ತಕ್ಷಣ ಬಂಧಿಸಬೇಕು. ಬಂಧಿಸಿ ವಿಚಾರಣೆ ಮಾಡಬೇಕು, ಇದು ಜಂಗಲ್ ರಾಜ್ಯ ಅಲ್ಲ. ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಸಂವಿಧಾನ ಹಿಡಿದುಕೊಂಡು ಓಡಾಡುವ ಅವರ ಪಾರ್ಟಿಯ ಅಧ್ಯಕ್ಷರು ಉತ್ತರಿಸಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕರ್ನಾಟಕದಲ್ಲಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಅಧಿಕಾರದ ದುರುಪಯೋಗ ನಡೆದಿದೆ. ಮುಡಾಕ್ಕೆ ಸಂಬಂಧಿಸಿದ ಹೈಕೋರ್ಟಿನ ತೀರ್ಪಿನಡಿ 180ನೇ ಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಿಂದ ಅಧಿಕಾರ ದುರುಪಯೋಗ ಆಗಿದೆ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.

ಲೋಕಾಯುಕ್ತವು ಅದರ ಬಳಿಕ 120 ಬಿ, 166, 403, 406, 420, 465 ಮೊದಲಾದ ಸೆಕ್ಷನ್‌ಗಳನ್ವಯ ಎಫ್‌ಐಆರ್ ದಾಖಲಿಸಿದೆ. ಇಷ್ಟು ದೊಡ್ಡದಾದ ಗುರುತರ ಆರೋಪಗಳಿದ್ದು, ಎ1 ಆರೋಪಿ ಆಗಿದ್ದರೂ ಸಿದ್ದರಾಮಯ್ಯ ಅವರು ರಾಜಾರೋಷವಾಗಿ ಓಡಾಡಲು ಅವಕಾಶ ಇದೆಯೇ ಎಂದು ಪ್ರಶ್ನಿಸಿದರು. ಲೋಕಾಯುಕ್ತ ಅಧಿಕಾರಿಗಳು ಅವರನ್ನು ಯಾಕೆ ಬಂಧಿಸಿಲ್ಲ? ಶ್ರೀಸಾಮಾನ್ಯನಿಗೆ ಒಂದು ನ್ಯಾಯ, ಸಿದ್ದರಾಮಯ್ಯ ಅವರಿಗೆ ಇನ್ನೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಯಾವತ್ತೂ ನ್ಯಾಯದ ಪರ ನಿಲ್ಲದ ವ್ಯಕ್ತಿ. ಅವರ ಮೇಲೆ ಆರೋಪ ಬಂದಾಗ ಲೋಕಾಯುಕ್ತವನ್ನು ಮುಚ್ಚಿದ್ದರು. ಲೋಕಾಯುಕ್ತವನ್ನು ಮರು ಸ್ಥಾಪಿಸಲು 7 ವರ್ಷ ಬೇಕಾಯಿತು. ಎಸಿಬಿ ರಚನೆ ಮಾಡಿದ್ದರು. 106 ಕೇಸುಗಳು ಅವರ ಮೇಲಿತ್ತು. ಆ ಕೇಸುಗಳ ಪೈಕಿ 56 ಕೇಸುಗಳಿಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟಿನ ನಿರ್ದೇಶನದ ಮೇರೆಗೆ ಈ ದೇಶದಲ್ಲಿ ಲೋಕಾಯುಕ್ತವನ್ನು ರಾಜ್ಯದಲ್ಲಿ ಮರು ಸ್ಥಾಪಿಸಿದ್ದಾರೆ ಎಂದು ವಿವರಿಸಿದರು.

ತನ್ನ ಮೇಲೆ ಆರೋಪ ಬಂದಾಗ ಲೋಕಾಯುಕ್ತವನ್ನೇ ಮುಚ್ಚುವ ಸಿದ್ದರಾಮಯ್ಯ, ಇವತ್ತು ಈ ಭ್ರಷ್ಟಾಚಾರ ಆರೋಪದಲ್ಲಿ ಅವರೇ ಅಧಿಕಾರದಲ್ಲಿದ್ದುಕೊಂಡು, ಕಡತಗಳನ್ನು (ಡಾಕ್ಯುಮೆಂಟ್) ಮುಚ್ಚಿ ಹಾಕಲು ಸಾಧ್ಯವಿಲ್ಲವೇ? ಕಡತಗಳನ್ನು ಸಚಿವ ಬೈರತಿ ಸುರೇಶ್ ಅವರು ಬಂದು ಎತ್ತಿಕೊಂಡು ಹೋಗಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.