ನ್ಯೂಸ್

ಲೋಕ ಅದಾಲತ್‌ನಲ್ಲಿ ಒಂದಾದ 3 ಜೋಡಿ

ಬೈಲಹೊಂಗಲ: ಇಲ್ಲಿನ ನ್ಯಾಯಾಲಯದಿಂದ ಶನಿವಾರ ಹಮ್ಮಿಕೊಂಡಿದ್ದ ಲೋಕಾ ಅದಾಲತ್ ವಿಚ್ಛೇದನ ಬಯಸಿ ವಿಚಾರಣೆ ಎದುರಿಸುತ್ತಿದ್ದ ಮೂವರು ದಂಪತಿ ಒಂದುಗೂಡಿಸುವ ಘಳಿಗೆಗೆ ಸಾಕ್ಷಿಯಾಯಿತು. ಹಣಕಾಸಿನ ಸಮಸ್ಯೆ, ತಪ್ಪು ತಿಳಿವಳಿಕೆ ಮೂಲಕ ಬೇರ್ಪಟ್ಟ ಜೋಡಿಗಳಿಗೆ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಜೀವನದಲ್ಲಿ ಹೊಂದಿಕೊಂಡು ನಡೆದರೆ ಮಾತ್ರ ಬದುಕು ಸಾರ್ಥಕವಾಗಲಿದೆ ಎಂದು ಮನವರಿಕೆ ಮಾಡಿದರು.

ಅನವಶ್ಯಕವಾಗಿ ಸಣ್ಣ ಸಣ್ಣ ಸಮಸ್ಯೆಗಳನ್ನು ಪ್ರತಿಷ್ಠೆಗೆ ಒಡ್ಡಿದರೆ ಬದುಕು ಹಾಳಾಗಲಿದೆ. ಹೀಗಾಗಿ ಕೂಡಿಕೊಂಡು ಬಾಳಬೇಕೆಂಬ ನ್ಯಾಯಾಧೀಶರ ಸಲಹೆ ಒಪ್ಪಿ ಬಾಳ ಸಂಗಾತಿಗಳು ಒಂದಾದರು. ನ್ಯಾಯವಾದಿ ಡಿ.ಎಸ್. ಬೊಂಗಾಳೆ, ಆನಂದ ತುರಮರಿ, ಐ.ಎಂ. ಹುಣಶಿಕಟ್ಟಿ, ಜಯಶ್ರೀ ಬೂದಿಹಾಳ ಜೋಡಿಗಳ ಪರ ವಕಾಲತ್ತು ವಹಿಸಿದ್ದರು.

ಡಿ.ವೈ. ಗರಗದ, ಪೂಜಾ ದುಮಾಲೆ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರು. ನ್ಯಾಯಾಧೀಶರಾದ ರವಿ ಚವ್ಹಾಣ, ಬಸವರಾಜ ನಾಯ್ಕ ಮಾರ್ಗದರ್ಶನದಲ್ಲಿ 931 ಅಪಘಾತ, ಆಸ್ತಿವಿವಾದ, ಚೆಕ್‌ಬೌನ್ಸ್, ಬ್ಯಾಂಕ್ ಹಣ ವಸೂಲಾತಿ ಸೇರಿ ಅನೇಕ ಪ್ರಕರಣಗಳು ಇತ್ಯರ್ಥಗೊಂಡವು. ಅದಾಲತ್‌ನಲ್ಲಿ ಒಟ್ಟು 2.56 ಕೋಟಿ ರೂ.ಗೆ ಸಂಬಂಧಿಸಿದ ಪ್ರಕರಣಗಳನ್ನು ಪರಸ್ಪರ ಹೊಂದಾಣಿಕೆ ಮೂಲಕ ಬಗೆಹರಿಸಲಾಯಿತು.

ಶಿರಸ್ತೇದಾರ ಸಿ.ಎಸ್. ಮಠಪತಿ, ಜ್ಯೋತಿ ಕುಲಕರ್ಣಿ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಎ.ಎ್.ಪಟ್ಟಿಹಾಳ, ಸುಜಾತಾ ಚಿಕ್ಕಮಠ, ಎಸ್.ಎಸ್.ಮಠದ, ಎಸ್.ವೈ. ಪಾಟೀಲ, ಬಸವರಾಜ ದೋತರದ, ಎಸ್.ವಿ. ಸಿದ್ದಮನಿ, ಐ.ಡಿ. ವಂಟಿ, ಕೆ.ಎಸ್. ಕುಲಕರ್ಣಿ, ಡಿ.ಎಸ್. ದೊಡಮನಿ, ಐ.ಎಸ್. ಪಾಟೀಲ, ತಾಲೂಕು ಕಾನೂನು ಸೇವಾ ಸಮಿತಿ ಸಂಚಾಲಕ ಉಮೇಶ ಕಾರಜೋಳ ಇತರರಿದ್ದರು.