ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಲೇಡಿಸ್ ಬಾರ್ ಮಾಲೀಕನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿ ಹತ್ಯೆಗೆ ಯತ್ನಿಸಿದ್ದು, ರಾಜಧಾನಿ ಬೆಚ್ಚಿಬೀಳಿಸಿದೆ.
ಬ್ರಿಗೇಡ್ ರಸ್ತೆ ಸಮೀಪದ ಆರ್‌ಎಚ್‌ಪಿ ರಸ್ತೆಯಲ್ಲಿನ ಡುಯಟ್ ಲೇಡಿಸ್ ಬಾರ್ ಮಾಲೀಕ ಮನೀಶ್ ಶೆಟ್ಟಿ(45) ಗಾಯಗೊಂಡವ. ಗುರುವಾರ ರಾತ್ರಿ 9 ಗಂಟೆಯಲ್ಲಿ ಆರ್. ಎಚ್.ಪಿ. ರಸ್ತೆಯಲ್ಲಿ ಇರುವ ತನ್ನ ಬಾರ್ ಮುಂಭಾಗ ಮನೀಶ್ ಶೆಟ್ಟಿ ನಿಂತಿದ್ದರು. ಅದೇ ವೇಳೆಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿ ಸ್ಥಳದಿಂದ ಪಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಜನರು ಮತ್ತು ಬಾರ್ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೀಶ್ ಶೆಟ್ಟಿಯನ್ನು ವಾಹನದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ವಿಷಯ ತಿಳಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಕೇಂದ್ರ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್ ಸಹ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಗಾಯಾಳು ಮನೀಶ್ ಶೆಟ್ಟಿ, ಮಂಗಳೂರಿನಲ್ಲಿ ರೌಡಿಶೀಟರ್ ಆಗಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.