ನ್ಯೂಸ್

ಲಿಂಗ ತಾರತಮ್ಯ ಹೆಣ್ಣಿಗೆ ಮಾತ್ರವಲ್ಲ ಪುರುಷರಲ್ಲೂ ಇದೆ

ಹುಣಸೂರು: ಲಿಂಗ ತಾರತಮ್ಯ ಎನ್ನುವುದು ಕೇವಲ ಹೆಣ್ಣಿಗೆ ಮಾತ್ರವಲ್ಲದೇ ಪುರುಷ ಮತ್ತು ತೃತೀಯಲಿಂಗಿಗಳನ್ನು ಬಾಧಿಸುತ್ತಿದೆ ಎಂದು ಮಂಗಳೂರಿನ ಹಿತ ಸಂಸ್ಥೆಯ ಮುಖ್ಯಸ್ಥೆ ವಾಣಿ ಪೆರಿಯೋಡಿ ಅಭಿಪ್ರಾಯಪಟ್ಟರು.


ನಗರದ ಮಹಿಳಾ ಸರ್ಕಾರಿಕಾಲೇಜಿನಲ್ಲಿ ಶನಿವಾರ ಮಹಿಳಾ ಸಬಲೀಕರಣ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ ಮತ್ತು ಮೈಸೂರು ಸಮತಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಲಿಂಗತ್ವ ಸಮ ನ್ಯಾಯದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಹೆಣ್ಣಿನ ಕುರಿತಾಗಿನ ತಾರತಮ್ಯತೆಯನ್ನು ಎಲ್ಲರೂ ಸೇರಿ ಬಗೆಹರಿಸಬೇಕಿದೆ. ಲಿಂಗ ತಾರತಮ್ಯ ಕೇವಲ ಹೆಣ್ಣಿಗೆ ಸೀಮಿತವಾಗದೇ ಗಂಡಿಗೂ, ತೃತೀಯ ಲಿಂಗಿಗಳನ್ನು ಬಾಧಿಸುತ್ತಿದೆ. ಹೆಣ್ಣಿನ ಮೇಲೆ ಸಾವಿರಾರು ಕಟ್ಟುಪಾಡುಗಳಿರುವಂತೆ ಗಂಡಿನ ಮೇಲೂ ಇದೆ. ಹೆಣ್ಣು ಆತ್ಮವಿಶ್ವಾಸದಿಂದ ಬದುಕಬೇಕು. ಹೆಣ್ಣಿಗೆ ವಿದ್ಯೆ. ಜ್ಞಾನ, ಅರಿವು ಬಹಳ ಮುಖ್ಯ. ಶೋಷಿತ ಹೆಣ್ಣಿನ ಬೆಂಬಲಕ್ಕೆ ಇಡೀ ಸಮಾಜ ಬರಬೇಕು. ಲಿಂಗತ್ವ ಸಮ ನ್ಯಾಯವು ಸಮಾಜದ ಸದೃಢ ಮತ್ತು ಸಕಾರಾತ್ಮಕ ಬೆಳವಣಿಗೆಗೆ ಮೂಲ ಅಡಿಪಾಯವಾಗಬೇಕಿದೆ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಹಾಗೂ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಬಿಹಾ ಭೂಮಿಗೌಡ ಮಾತನಾಡಿ, ಮಹಿಳೆಯರ ಮೇಲಿನ ತಾರತಮ್ಯ ನೀತಿಯ ವಿರುದ್ಧ 25 ವರ್ಷಗಳ ಹಿಂದೆ ಹುಟ್ಟಿಕೊಂಡ ಸಮತಾ ಅಧ್ಯಯನ ಕೇಂದ್ರ, ಸಮಾನತೆಯ ಪರಿಕಲ್ಪನೆಯ ಸಾಕಾರಕ್ಕೆ ಶ್ರಮಿಸುತ್ತಿದೆ. ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಅಧ್ಯಯನ ಕೇಂದ್ರದ ಸ್ಥಾಪನೆಗೆ ಮೂಲಪ್ರೇರಣೆ ನಮ್ಮನ್ನಗಲಿರುವ ವಿಜಯಾ ದಬ್ಬೆಯವರಾಗಿದ್ದು, ಮಹಿಳಾ ಸಬಲೀಕರಣದ ಕುರಿತು ಅವರ ಅಭಿಪ್ರಾಯಗಳೇ ನಮ್ಮ ಕೇಂದ್ರಕ್ಕೆ ದಾರಿದೀಪವಾಗಿದೆ. ವ್ಯವಸ್ಥೆ ಚೆನ್ನಾಗಿದೆ ಎಂದು ನಾವು ಕಣ್ಣುಮುಚ್ಚಿ ಕುಳಿತಿದ್ದರೆ, ಅದು ನಮ್ಮೆಲ್ಲರ ತಪ್ಪಾಗುತ್ತದೆ. ಮಹಿಳೆಯರ ಬದುಕು, ಬವಣೆ ಕುರಿತಾದ ನಮ್ಮೆಲ್ಲರ ದೃಷ್ಟಿಕೋನ ಬದಲಾಗಬೇಕಿದೆ. ಆಕೆಗೂ ಸಮಾನತೆಯ ಸಿಹಿಯನ್ನು ಉಣಬಡಿಸಬೇಕಿದೆ ಎಂದರು.


ಪ್ರಭಾರ ಪ್ರಾಂಶುಪಾಲ ಡಾ.ಟಿ.ಕೆ.ಬೋಪಯ್ಯ, ದೌರ್ಜನ್ಯ ತಡೆ ಸಮಿತಿ ಸಂಯೋಜಕಿ ಡಾ.ಪ್ರತಿಭಾ ಜೆನಿಫರ್, ಸಿಡಿಸಿ ಉಪಾಧ್ಯಕ್ಷ ಹನಗೋಡು ನಟರಾಜ್, ಅಧ್ಯಾಪಕರಾದ ಡಾ.ಬಿ.ನಂಜುಂಡಸ್ವಾಮಿ, ಡಾ.ಕೆ.ರಮಣಿನಾಯ್ಕ ಹಾಗೂ ವಿದ್ಯಾರ್ಥಿನಿಯರು ಇದ್ದರು. ವಾಣಿ ಪರಿಯೋಡಿ ಹಾಡು, ನೃತ್ಯ, ನಾಟಕ ಮುಂತಾದ ಮಾಧ್ಯಮದ ಮೂಲಕ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಮಹಿಳಾ ಸಮಾನತೆ ಕುರಿತು ದೃಷ್ಟಾಂತಗಳನ್ನು ಪ್ರಸ್ತುತಪಡಿಸಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು.