ವಿಜಯವಾಣಿ ಸುದ್ದಿಜಾಲ ಕೋಲಾರ
ನರೇಗಾ ಯೋಜನೆಯ ನೆರವು ಪಡೆದ ಲಾರಿ ಚಾಲಕರೊಬ್ಬ ಗುಲಾಬಿ ಹೂ ಬೆಳೆದು ಕೈತುಂಬ ಆದಾಯಗಳಿಸಿ ಹೊಸ ಬದುಕು ರೂಪಿಸಿಕೊಂಡಿದ್ದಾನೆ.
ಕೋಲಾರ ತಾಲ್ಲೂಕು ಅರಾಭಿಕೊತ್ತನೂರ ಗ್ರಾಮಪಂಚಾಯತಿಯ ಚಿಕ್ಕಅಯ್ಯೂರು ಗ್ರಾಮದ ಸತೀಶ್ ಎಂಬುವರು, ಉದ್ಯೋಗ ಖಾತ್ರಿಯಲ್ಲಿ, ಗುಲಾಬಿ ಹೂವು ಬೆಳೆದ ಲಾರಿ ಚಾಲಕ.
ಸತೀಶ್ ಈ ಹಿಂದೆ ತಮ್ಮ ಕುಟುಂಬದ ಪೋಷಣೆಗಾಗಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೂರ್ವಜರಿಂದ ಬಂದಿದ್ದ ೩೦ ಗುಂಟೆ ಜಮೀನಿನಲ್ಲಿ ನೀಲಗಿರಿ ಹಾಕಿದ್ದರು. ಆದರೆ ಅದರಿಂದ ಹೆಚ್ಚು ಪ್ರಯೋಜನವೇನು ಇರಲಿಲ್ಲ. ನಿತ್ಯ ದೂರದ ಊರಿಗೆ ಹೋಗಿ ಅನ್ಯರ ಬಳಿಯ ದುಡಿಮೆ ತೃಪ್ತಿತರಲಿಲ್ಲ. ಸ್ವ-ಉದ್ಯೋಗ ಮಾಡುವ ನಿಟ್ಟಿನಲ್ಲಿ, ಜಮೀನಿನಲ್ಲಿದ್ದ ನೀಲಗಿರಿಯನ್ನು ಸಂಪೂರ್ಣವಾಗಿ ತೆಗದು, ಪಕ್ಕದ ಜಮೀನಿನಿಂದ ನೀರು ಪಡೆದು ಕೃಷಿ ಮಾಡಲು ಮುಂದಾದರು.
ಆದರೆ ಯಾವ ಬೆಳೆಯನ್ನು ಬೆಳೆಯಬೇಕು, ಎಂಬ ಯೋಚನೆಗೆ ಬಿದ್ದ ಸತೀಶ್‌ಗೆ ಸರ್ವಕಾಲಿಕ ಲಾಭದ ಬೆಳೆಯಾಗಿ ಕಂಡಿದ್ದು ಗುಲಾಬಿ. ಅಲ್ಲದೆ ಗುಲಾಬಿ ಹೂ ಬೆಳೆಯಲು ನರೇಗಾದಡಿಯಲ್ಲಿ ನೆರವು ನೀಡುವ ಮಾಹಿತಿ ಪಡೆದ.
ಸತೀಶ್ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹೂ ಬೆಳೆಯುವ ಬಗ್ಗೆ ತಿಳಿದುಕೊಂಡರು. ತಮಿಳುನಾಡಿನ ಅಗಲಕೋಟೆಯಿಂದ ೧೩೦೦ ಮೆರಾಬುಲ್ ಕೆಂಪುತಳಿಯ ಗುಲಾಬಿ ಗಿಡಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದರು. ಹನಿ ನೀರಾವರಿ ಪದ್ಧತಿ ಅಳವಸಿಕೊಂಡಿದ್ದು, ಸತೀಶ್ ಕುಟುಂಬದವರೇ ಗುಲಾಬಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ನರೇಗಾದಿಂದ ಕೂಲಿ ಹಾಗೂ ಸಾಮಗ್ರಿ ವೆಚ್ಚ ಸೇರಿ ೭೨೫೧೨ ರೂಪಾಯಿ ನೆರವು ಪಡೆದುಕೊಂಡಿರುವುದಾಗಿ ಸತೀಶ್ ತಿಳಿಸಿದ್ದಾರೆ.
ಬಾಕ್ಸ್
ಲಾರಿ ಚಾಲಕನ ಕೃಷಿ ಪಯಣಕ್ಕೆ ಮಹಾತ್ಮಗಾಂಧಿ ನರೇಗಾ ನೆರವಾಗಿದ್ದು, ಸ್ವಗ್ರಾಮದಲ್ಲಿ ಉತ್ತಮ ಆದಾಯಗಳಿಸುತ್ತಿರುವ ಸತೀಶ್ ಈಗ ಗ್ರಾಮದ ಜನರಿಗೆ ಮಾದರಿಯಾಗಿದ್ದಾರೆ. ಸತೀಶ್ರನ್ನು ಅನುಸರಿಸಿ, ಈಗ ಗ್ರಾಮದಲ್ಲಿ ಅನೇಕ ರೈತರು ನರೇಗಾ ನೆರವು ಪಡೆದು ಗುಲಾಬಿ ಬೆಳೆದು, ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
ಬಾಕ್ಸ್
ಗುಲಾಬಿ ಹೂವಿಗೆ ಸರ್ವಕಾಲದಲ್ಲೂ ಬೇಡಿಕೆ ಇದ್ದು, ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ದಿನಬಿಟ್ಟು ದಿನ ಕೊಯ್ಲು ಮಾಡುತ್ತಿದ್ದು, ೮೦ ರಿಂದ ೧೦೦ಕೆಜಿ ಹೂ ದೊರೆಯುತ್ತದೆ. ತಮ್ಮ ಗುಲಾಬಿ ಹೂಗಳನ್ನು ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗುಲಾಬಿಗೆ ಸಾಮಾನ್ಯ ದಿನಗಳಲ್ಲಿ ೬೦ ರಿಂದ ೧೦೦ ರೂಪಾಯಿ ಇದ್ದರೆ, ಹಬ್ಬದ ದಿನಗಳಲ್ಲಿ ೧೫೦ ರಿಂದ ೨೦೦ ರೂಪಾಯಿಗೆ ಮಾರಾಟವಾಗುತ್ತದೆ. ಇದರಿಂದ ರೈತ ಸತೀಶ್ ತಿಂಗಳಿಗೆ ಸರಾಸರಿ ೪೦ ರಿಂದ ೫೦ ಸಾವಿರ ಆದಾಯಗಳಿಸುತ್ತಿರುವುದಾಗಿ ಸತೀಶ್ ಮಾಹಿತಿ ನೀಡಿದ್ದಾರೆ.
ಕೋಟ್
ಲಾರಿ ಚಾಲಕನಾಗಿದ್ದ ನಾನು, ಈಗ ನರೇಗಾ ನೆರವು ಪಡೆದು ಗುಲಾಬಿ ಬೆಳೆದು, ಉತ್ತಮ ಆದಾಯಗಳಿಸುತ್ತಿದ್ದೇನೆ. ಗುಲಾಬಿ ಹೂವಿಗೆ ಸದಾ ಬೇಡಿಕೆ ಇದೆ. ನಷ್ಟ ಆಗೋದಿಲ್ಲ. ತೋಟವನ್ನ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ, ಉತ್ತಮ ಲಾಭ ಪಡೆಯಬಹುದು. ಉದ್ಯೋಗ ಖಾತ್ರಿ ಯೋಜನೆ ಬಡ ರೈತರಿಗೆ ತುಂಬ ಉಪಯುಕ್ತವಾಗಿದ್ದು, ಅದನ್ನ ಸದ್ಬಳಕೆ ಮಾಡಿಕೊಳ್ಳಬೇಕು.
-ಸತೀಶ್, ಗುಲಾಬಿ ಬೆಳೆಗಾರ, ಚಿಕ್ಕಅಯ್ಯೂರು
ಕೋಟ್
ಸತೀಶ್ ಲಾರಿ ಚಾಲಕನಾಗಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ನನ್ನ ಬಳಿ ಮಾಹಿತಿ ನೀಡಿದ ನರೇಗಾ ಯೋಜನೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಕೂಲಿ ಮತ್ತು ಸಾಮಗ್ರಿಗಳ ಖರೀದಿಗೆ ಹಣ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಂಡು ಚಾಲಕನ ವೃತ್ತಿ ಬಿಟ್ಟು ಮತ್ತು ಗುಲಾಬಿ ಹೂವು ಬೆಳೆದ ಸತೀಶ್ ಪ್ರಗತಿಪರ ರೈತನಾಗಿದ್ದು, ಲಾಭವೂ ಗಳಿಸುತ್ತಿದ್ದಾನೆ.
-ಸಿ.ಆನಂದ್, ನರೇಗಾ ಸಂಯೋಜಕರು, ಕೋಲಾರ.
ಚಿತ್ರ ೧೩ ಕೆ.ಎಲ್.ಆರ್. ೦೫ : ಸತೀಶ್ ರವರ ಭಾವಚಿತ್ರ
ಚಿತ್ರ ೧೩ ಕೆ.ಎಲ್.ಆರ್. ೦೫ಎ : ಸತೀಶ್ ತಮ್ಮ ೩೦ ಗುಂಟೆ ಜಮೀನಿನಲ್ಲಿ ಗುಲಾಬಿ ಹೂವನ್ನು ಬೆಳೆದಿರುವುದು.
ಚಿತ್ರ ೧೩ ಕೆ.ಎಲ್.ಆರ್. ೦೫ಬಿ : ಸಿ.ಆನಂದ್ ಭಾವಚಿತ್ರ