ನಿಪ್ಪಾಣಿ: ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿಯ ೨೦೨೪-೨೫ನೇ ಆರ್ಥಿಕ ವರ್ಷದಲ್ಲಿ ೮.೩೦ ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಸ್ಥಾಪಕ ಚೇರ್ಮನ್ ಡಾ. ಚಂದ್ರಕಾಂತ ಕುರಬೆಟ್ಟಿ ಹೇಳಿದರು.
ಇಲ್ಲಿನ ಮುಖ್ಯ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿಯ ೩೫ ಶಾಖೆ, ೫೯,೪೦೦ ಸದಸ್ಯರು, ೭ ಸ್ವಂತ ಕಟ್ಟಡ ಹೊಂದಿದೆ. ೧.೧೫ ಕೋಟಿ ರೂ. ಷೇರು ಬಂಡವಾಳ, ೭೪ ಕೋಟಿ ರೂ. ಸ್ವಂತ ನಿಧಿ, ೭೨೯ ಕೋಟಿ ರೂ. ದುಡಿಯುವ ಬಂಡವಾಳ, ೨೨೩ ಕೋಟಿ ರೂ. ಗುಂತಾವಣೆ, ೫,೯೨೨ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ. ೬೧೮ ಕೋಟಿ ರೂ. ಠೇವು ಸಂಗ್ರಹಿಸಿ ೪೬೫ ಕೋಟಿ ರೂ. ಸಾಲ ವಿತರಿಸಲಾಗಿದೆ. ಶೇ.೯೫.೧೮ ಸಾಲ ಮರುಪಾವತಿಯಾಗಿದೆ. ಆಡಳಿತ ಮಂಡಳಿ ಸದಸ್ಯರ ನಿಸ್ವಾರ್ಥ ಸೇವಾ ಮನೋಭಾವನೆಯೇ ಸಹಕಾರಿಯ ಏಳಿಗೆಗೆ ಕಾರಣ ಎಂದರು.
೩೫ ವರ್ಷದಿಂದ ಗ್ರಾಹಕರಿಗೆ ಪಾರದರ್ಶಕ ಸೇವೆ ನೀಡುತ್ತ ಬಂದಿದ್ದೇವೆ. ಚಿಂಚಲಿ, ಕಾಗವಾಡ, ಶಿರಗುಪ್ಪಿ, ಮೂಡಲಗಿ, ಮಹಾಲಿಂಗಪುರ ಮೊದಲಾದೆಡೆ ಶಾಖೆ ಪ್ರಾರಂಭಿಸಲಾಗುವುದು. ಸದ್ಯದಲ್ಲಿ ಸಹಕಾರಿಯಲ್ಲಿ ಕೋರ್ ಬ್ಯಾಂಕಿಂಗ್ ಪದ್ಧತಿ ಅಳವಡಿಸಲಾಗಿದ್ದು, ಮೊಬೈಲ್ ಬ್ಯಾಂಕಿಂಗ್ ಶೀಘ್ರದಲ್ಲೇ ಆರಂಭಿಸಲಾಗುವುದು. ಆನ್‌ಲೈನ್ ಸಾಲ ಸೌಲಭ್ಯ ಸಹ ಕಲ್ಪಿಸಲಾಗಿದೆ ಎಂದರು.
ವೈಸ್-ಚೇರ್ಮನ್ ಪ್ರತಾಪ ಪಟ್ಟಣಶೆಟ್ಟಿ, ಸಂಚಾಲಕ ಸುರೇಶ ಶೆಟ್ಟಿ, ಡಾ. ಶಂಕರಗೌಡ ಪಾಟೀಲ, ಕಿಶೋರ ಬಾಳಿ, ಮಹೇಶ ಬಾಗೇವಾಡಿ, ಅಶೋಕ ಲಿಗಾಡೆ, ಸದಾನಂದ ಧುಮಾಲೆ, ದಿನೇಶ ಪಾಟೀಲ, ಪ್ರತಾಪ ಮೇತ್ರಾಣಿ, ಸದಾಶಿವ ಧನಗರ, ಸಿಇಓ ಶಶಿಕಾಂತ ಆದಣ್ಣವರ, ಮೊದಲಾದವರು ಸಹಿತ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.