ನ್ಯೂಸ್

ಲಾಕ್​ಡೌನ್​ ಸಸ್ಪೆನ್ಸ್​; ಟಾಸ್ಕ್​ಫೋರ್ಸ್​ ಜತೆ ಸಿಎಂ ಸಭೆ ಇಂದು

ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್ ಪಸರಿಸುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿ ನಲ್ಲಿ ಹೇರಲಾಗಿರುವ ಒಂದು ವಾರದ ಲಾಕ್​ಡೌನ್ ವಿಸ್ತರಣೆ ಮಾಡುವ ಕುರಿತು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಕುರಿತು ಸರ್ಕಾರ ಸೋಮವಾರ (ಜು.20) ಮಹತ್ವದ ನಿರ್ಧಾರ ಪ್ರಕಟಿಸಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಪ್ರಮುಖರ ಸಭೆ ನಡೆಯಲಿದ್ದು, ಜತೆಗೆ ಟಾಸ್ಕ್​ಫೋರ್ಸ್ ಸಮಿತಿ ಸಭೆಯೂ ನಡೆಯಲಿದೆ. ಪರಿಸ್ಥಿತಿ ಕುರಿತು ಸಮಾಲೋಚಿಸಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಲಾಕ್​ಡೌನ್ ಮುಂದುವರಿಸುವುದು ಬೇಡ ಎಂಬುದು ಸಿಎಂ ಅಭಿಪ್ರಾಯವಾಗಿದೆ. ಗೃಹ ಸಚಿವರು ಸೇರಿ ಹಲವು ಸಚಿವರೂ ಇದೇ ನಿಲುವು ತಳೆದಿದ್ದಾರೆ ಎನ್ನಲಾಗಿದೆ. ಆದರೆ, ಹಿರಿಯ ಅಧಿಕಾರಿಗಳು ಲಾಕ್​ಡೌನ್ ಇನ್ನೊಂದು ವಾರ ವಿಸ್ತರಣೆ ಮಾಡುವುದೇ ಸೂಕ್ತ ಎಂದು ಪ್ರತಿಪಾದಿಸುತ್ತಿದ್ದಾರೆ. ಹಾಗೆ ನೋಡಿದರೆ, ಲಾಕ್​ಡೌನ್​ನಿಂದ ಕೋವಿಡ್ ನಿಯಂತ್ರಣಕ್ಕೆ ಬರುವುದಿಲ್ಲ ಎಂಬ ಸಂಗತಿಗೆ ಪ್ರತಿದಿನದ ಪಾಸಿಟಿವ್ ಅಂಕಿಸಂಖ್ಯೆಗಳು ಕನ್ನಡಿ ಹಿಡಿಯುತ್ತಿವೆ. ಸೋಂಕಿತರ ಸಂಖ್ಯೆ ಏರುತ್ತಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.

ಸಿದ್ಧತೆ ಕೊರತೆ: ಬೆಂಗಳೂರಿನಲ್ಲಿ ಕರೊನಾಗೆ ಬ್ರೇಕ್ ಹಾಕಲು ಲಾಕ್​ಡೌನ್ ಮೊರೆ ಹೋದ ಸರ್ಕಾರ, ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ಮೊದಲ ಲಾಕ್​ಡೌನ್ ಅವಧಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ರೀತಿಯಲ್ಲಿ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮೀನಮೇಷ ಎಣಿಸಿತು. ಜತೆಗೆ ಲಾಕ್​ಡೌನ್ ಅವಧಿಯಲ್ಲಿ ಯಾರು ಏನು ಮಾಡಬೇಕು ಎನ್ನುವ ಸ್ಪಷ್ಟತೆಯೇ ಸರ್ಕಾರಕ್ಕೆ ಇರಲಿಲ್ಲ. ಕೊನೆಯ ತನಕವೂ ಗೊಂದಲದಲ್ಲಿಯೇ ಸಿಲುಕಿದ ಸರ್ಕಾರ ಧೃಢ ನಿರ್ಧಾರಕ್ಕೆ ಬರಲಿಲ್ಲ. ಒತ್ತಡಕ್ಕೆ ಮಣಿದು, ಕೈಗಾರಿಕೆಗಳಿಗೆ ಕೊನೆ ಕ್ಷಣದಲ್ಲಿ ವಿನಾಯಿತಿ ನೀಡಿತು. ಪೊಲೀಸ್ ಇಲಾಖೆ ಕೂಡ ಈ ಬಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದೆ, ಒಂದಿಷ್ಟು ಉದಾರವಾಗಿ ನಡೆದುಕೊಂಡಿದೆ.

ತಜ್ಞರ ಒಲವು: ಲಾಕ್​ಡೌನ್ ಬದಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಸಿಎಂ ನಿಲುವು. ಆದರೆ, ತಜ್ಞರ ಸಮಿತಿ ಅಭಿಪ್ರಾಯ ಇದಕ್ಕೆ ವಿರುದ್ಧವಾಗಿದೆ. ಶೀತದ ವಾತಾವರಣವಿರುವ ಕಾರಣ, ಬೆಂಗಳೂರಿನಲ್ಲಿ ವೈರಸ್ ನಿಯಂತ್ರಣಕ್ಕೆ ತರಲು ಕನಿಷ್ಠ ಇನ್ನೊಂದು ವಾರ ಲಾಕ್​ಡೌನ್ ಅನಿವಾರ್ಯ ಎಂಬುದು ಸಮಿತಿ ಅಭಿಪ್ರಾಯವಾಗಿದೆ.

ಯಾವುದೇ ಕಾರಣಕ್ಕೂ ಮಂಗಳವಾರದ ನಂತರ ಬೆಂಗಳೂರಿನಲ್ಲಿ ಲಾಕ್​ಡೌನ್ ಮುಂದುವರಿಯುವುದಿಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಸಹ ಸ್ಪಷ್ಟನೆ ನೀಡಿದ್ದಾರೆ. | ಬಸವರಾಜ ಬೊಮ್ಮಾಯಿ ಗೃಹ ಸಚಿವ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಅದನ್ನು ತಡೆಯಲು ಸಮುದಾಯದ ಸಹಕಾರ ಮುಖ್ಯ. ಜನರು ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಕೋವಿಡ್ ತಹಬಂದಿಗೆ ಬರಬಹುದು. ಲಾಕ್​ಡೌನ್ ಒಂದೇ ಕೋವಿಡ್ ನಿಯಂತ್ರಣಕ್ಕೆ ಪರಿಹಾರವಲ್ಲ. | ಡಾ.ಸಿ.ಎನ್.ಮಂಜುನಾಥ್  ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ https://www.vijayavani.net/no-decision-on-school-reopening-says-sureshkumar/