ನ್ಯೂಸ್

ಲಾಕ್​ಡೌನ್ ವಿಸ್ತರಣೆಗೆ ಸಂಪುಟ ಒಕ್ಕೊರಲ ಅಭಿಪ್ರಾಯ

ಬೆಂಗಳೂರು: ರಾಜ್ಯದಲ್ಲಿ ಏ.30ರವರೆಗೆ ಲಾಕ್​ಡೌನ್ ಮುಂದುವರಿಸಬೇಕೆಂಬ ಒಮ್ಮತದ ಅಭಿಪ್ರಾಯ ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಹೊರಹೊಮ್ಮಿದೆ. ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟದ ಎಲ್ಲ ಸಚಿವರು ಏ.30ರವರೆಗೆ ಲಾಕ್​ಡೌನ್ ವಿಸ್ತರಿಸುವಂತೆ ಸಲಹೆ ನೀಡಿದ್ದಾರೆ.

ಈ ಕುರಿತು ಶನಿವಾರ ನಡೆಯುವ ವೀಡಿಯೋ ಕಾನ್ಪರೆನ್ಸ್​ನಲ್ಲಿ ಪ್ರಧಾನ ಮಂತ್ರಿ ಮೋದಿಯವರು ನೀಡುವ ಸಲಹೆ-ಸೂಚನೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದರು. ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞ ವೈದ್ಯರ ತಂಡ ಏ.30ರವರೆಗೆ ಹಾಟ್​ಸ್ಪಾಟ್ ಜಿಲ್ಲೆಗಳಲ್ಲಿ ಲಾಕ್​ಡೌನ್​ನ್ನು ಮುಂದುವರಿಸುವುದು ಸೂಕ್ತ ಎಂಬ ಶಿಫಾರಸು ಮಾಡಿತ್ತು.

ಏ.14ರ ನಂತರ ಮದ್ಯ ಚಿಲ್ಲರೆ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಸಣ್ಣ ಚರ್ಚೆ ನಡೆದಿದೆ. ಆದರೆ ಈ ಬಗ್ಗೆ ಯಾವುದೇ ತೀರ್ವನಕ್ಕೆ ಬರಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.